2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರರು ನಡೆಸಿದ ದಾಳಿ, ಇಡೀ ದೇಶದ ಜನರ ಎದೆ ನಡುಗಿಸಿಬಿಟ್ಟಿತ್ತು. ಏಕಕಾಲಕ್ಕೆ ಉಗ್ರರು ನಡೆಸಿದ ಈ ದಾಳಿಗೆ ನೂರಾರು ಮಂದಿ ಭಾರತೀಯರು ಬಲಿಯಾದರು. ಅದರಲ್ಲಿ ಪೊಲೀಸರು, ಸೈನಿಕರು ಕೂಡ ಇದ್ದರು. ಹಾಗೇ ಸಾವನ್ನಪ್ಪಿದವರಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕೂಡ ಒಬ್ಬರು. ಇದೀಗ ಅವರ ಜೀವನದ ಕೆಲವು ಮಹತ್ತರ ಅಂಶಗಳನ್ನೇ ಕತೆ ಮಾಡಿದ ನಟ ಮಹೇಶ್ ಬಾಬು 'ಮೇಜರ್' ಸಿನಿಮಾ ನಿರ್ಮಿಸಿದ್ದಾರೆ. ಅದರಲ್ಲಿ ಹೀರೋ ಆಗಿ 'ಕ್ಷಣಂ', 'ಗೂಡಚಾರಿ', 'ಎವರು' ಖ್ಯಾತಿಯ ಅದ್ವಿ ಶೇಷ್ ನಟಿಸಿದ್ದಾರೆ. ಇಂದು ಅವರ ಜನ್ಮದಿನ. ಆ ಹಿನ್ನೆಲೆಯಲ್ಲಿ 'ಮೇಜರ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ.
ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರವನ್ನು ಮಾಡುವುದಕ್ಕಾಗಿ ಅದ್ವಿ ಶೇಷ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಸಂದೀಪ್ ಅವರ ಪೋಷಕರನ್ನು ಭೇಟಿ ಮಾಡಿದ್ದರಂತೆ ಅವರು. ಸಂದೀಪ್ ಅವರ ಬದುಕಿನ ಮತ್ತೊಂದು ಆಯಾಮವನ್ನು ಈ ಸಿನಿಮಾ ಮೂಲಕ ತೋರಿಸುವುದಾಗಿ ತಂಡ ಹೇಳಿಕೊಂಡಿದೆ. ಶೋಭಿತಾ ಧುಲಿಪಲಾ, ಸಾಯಿ ಮಂಜ್ರೇಕರ್ ಕೂಡ 'ಮೇಜರ್'ನಲ್ಲಿ ಬಣ್ಣ ಹಚ್ಚಿದ್ದಾರೆ.
PublicNext
17/12/2020 03:38 pm