ಸಾಹಸಸಿಂಹ ವಿಷ್ಣುವರ್ಧನ್ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ತೆಲುಗು ನಟ ವಿಜಯ್ ರಂಗರಾಜುಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪವರ್ ಸ್ಟಾರ್, ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನ ಹಿಂಪಡಿಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆ, ಎಲ್ಲ ಕಲಾವಿದರು ಒಂದು ಕುಟುಂಬ. ಕಲೆಗೆ ಕಲಾವಿದರಿಗೆ ಗೌರವಿಸುವುದು ನಮ್ಮ ಕರ್ತವ್ಯ. “ಮೊದಲು ಮಾನವನಾಗು” ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಒಬ್ಬ ಕಲಾವಿದನಾಗಬೇಕಾದರೆ ಅವನಿಗೆ ಇರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗೂ ಪ್ರೀತಿಯನ್ನು ತೋರುವುದು. ಯಾವುದೇ ಭಾಷೆಯ ನಟರಾದರೂ ಮೊದಲು ಗೌರವ ಕೊಡಬೇಕು ಎಂದು ತಿಳಿಸಿದ್ದಾರೆ.
ಏನಿದು ವಿವಾದ?: ಸನಟ ವಿಜಯ್ ರಂಗರಾಜು ದಶಕಗಳ ಹಿಂದೆ ವಿಷ್ಣುವರ್ಧನ್ ಜೊತೆ ತಾವು ನಟಿಸಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ನಡತೆ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ. ಅಲ್ಲದೇ ಅಂದು ತಾವು ವಿಷ್ಣುವರ್ಧನ್ ಅವರ ಕಾಲರ್ ಹಿಡಿದು ಜಗಳ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಸಂದರ್ಶನದ ವಿಡಿಯೋ ತುಣುಕು ಒಂದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಷ್ಣುವರ್ಧನ್ ಅಭಿಮಾನಿಗಳು, ಸ್ಟಾರ್ ನಟರು ಸೇರಿದಂತೆ ಕನ್ನಡಿಗರೆಲ್ಲರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
12/12/2020 04:13 pm