ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಕಳೆದ ಹಲವು ವರ್ಷಗಳಿಂದ ಬರದ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಜಿಲ್ಲೆಯ ಜನರ ಏಕೈಕ ಜೀವನಾಡಿಯೇ ವಾಣಿ ವಿಲಾಸ ಸಾಗರ. ಹೌದು, ಜಿಲ್ಲೆಯ ಪರಿಸ್ಥಿತಿಯನ್ನು ನೋಡಿಕೊಂಡ ಮೈಸೂರು ಅರಸರು, ವೇದಾವತಿ ನದಿಗೆ ಅಡ್ಡಲಾಗಿ 130 ಅಡಿ ಎತ್ತರದಲ್ಲಿ ಈ ಡ್ಯಾಮ್ ನಿರ್ಮಾಣ ಮಾಡಿದ್ರು.
30 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಇರುವ ಡ್ಯಾಮ್ ಭರ್ತಿಯಾದ್ರೆ ಡ್ಯಾಮ್ ನ ಹಿನ್ನೀರು ಹೊಸದುರ್ಗ ತಾಲೂಕಿನ ಬಹುತೇಕ ಜಮೀನಿನಲ್ಲಿ ತನ್ನ ನದಿ ಪಾತ್ರ ನಿರ್ಮಾಣ ಮಾಡುತ್ತೆ. ರೈತರ ಜಮೀನಿಗೆ ನೀರು ನುಗ್ಗಿ ರೈತರ ಬೆಳೆ ಜಲಾವೃತವಾಗುತ್ತೆ. 2023ರಲ್ಲಿ 89 ವರ್ಷಗಳ ಇತಿಹಾಸದಲ್ಲಿ ಭರ್ತಿಯಾಗಿದ್ದ ವಿ.ವಿ. ಸಾಗರ ಡ್ಯಾಮ್ ತುಂಬಿ ಕೋಡಿ ಹರಿದಿತ್ತು. ಈ ವರ್ಷ ಮತ್ತೆ ತುಂಬುವ ಹಂತಕ್ಕೆ ತಲುಪಿದೆ.
ಸದ್ಯ ಜಲಾಶಯದಲ್ಲಿ 127 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಪರಿಣಾಮ ಹೊಸದುರ್ಗ ತಾಲೂಕಿನ ಬೇವಿನಹಳ್ಳಿ, ಅಂಚಿಬಾರಿಹಟ್ಟಿ, ಲಕ್ಕಿಹಳ್ಳಿ, ಪೂಜಾರಹಟ್ಟಿ ಸೇರಿದಂತೆ ಸುತ್ತಲ ಗ್ರಾಮಗಳ ರೈತರ ಜಮಿನಿಗೆ ನೀರು ನುಗ್ಗಿದೆ. ಹತ್ತಿ, ಮೆಕ್ಕೆಜೋಳ, ರಾಗಿ, ಜೋಳ ಸೇರಿದಂತೆ ಅನೇಕ ಬೆಳೆಗಳು ಜಲಾವೃತವಾಗಿವೆ. ಲಕ್ಷ ಲಕ್ಷ ಬಂಡವಾಳ ಹಾಕಿದ್ದ ಜನರಲ್ಲಿ ಕಣ್ಣೀರು ತರಿಸಿದೆ.
ಇನ್ನು, ಮಾರಿಕಣಿವೆಯ ಹಿನ್ನೀರು ಪ್ರದೇಶದಲ್ಲಿ ಬರುವ ಪೂಜಾರಹಟ್ಟಿ ಗ್ರಾಮದ ಕೆಲ ರೈತರ ಜಮೀನಲ್ಲಿನ ಬೆಳೆ ಸಹಿತವಾಗಿ ಮನೆಗಳು ಜಲಾವೃತವಾಗುವ ಭೀತಿ ಎದುರಾಗಿದೆ. ಕಳೆದ ಬಾರಿ ಡ್ಯಾಂ ಕೋಡಿ ಬಿದ್ದ ವೇಳೆ ಸಂಪೂರ್ಣ ಜಲಾವೃತವಾಗಿ, ಮನೆ ಖಾಲಿ ಮಾಡಿದ್ದರು. ಇದೀಗ ಅಂಥದ್ದೇ ಪರಿಸ್ಥಿತಿ ಇಲ್ಲಿನ ನಿವಾಸಿಗಳಿಗೆ ಎದುರಾಗಿದೆ.
ಒಟ್ಟಾರೆ ಸರ್ಕಾರ, ರೈತರ ಈ ಗಂಭೀರ ಸಮಸ್ಯೆಗೆ ಕೂಡಲೇ ಸ್ಪಂದಿಸಿ, ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಇಲ್ಲಿನ ರೈತರ ಆಗ್ರಹವಾಗಿದೆ.
PublicNext
03/11/2024 08:24 pm