ಚಿಕ್ಕಬಳ್ಳಾಪುರ ಜಿಲ್ಲೆಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮೇಲೆ ಇದೇ ತಿಂಗಳ 9 ರಂದು ಬೆಳಗ್ಗೆ 6:40 ರ ಸಮಯದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಈ ಕೃತ್ಯವನ್ನು ಖಂಡಿಸಿ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಿಡ್ಲಘಟ್ಟ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಭಕ್ತರಹಳ್ಳಿ ಪ್ರತೀಶ್ ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು ತಲೆ ಎಡಭಾಗಕ್ಕೆ ಮಚ್ಚಿನಿಂದ ಹೊಡೆದು, ಬೆನ್ನಿಗೆ ಚಾಕುವಿನಿಂದ ಬಲವಾಗಿ ಹಾಗೂ ಎದೆ ಭಾಗದಲ್ಲಿ ಆರು ಬಾರಿ ಚಾಕುವಿನಿಂದ ಇರಿದಿದ್ದಾರೆ. ಇದ್ರಿಂದ ಪ್ರತೀಶ್ ರವರ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೇ ಕುಟುಂಬದ ಮಹಿಳೆಯರ ಮೇಲೂ ದೈಹಿಕವಾಗಿ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.
ಹಲ್ಲೆ ಮಾಡಿರುವಂತಹ ಆರೋಪಿಗಳು ಅದೇ ಗ್ರಾಮದ ಉದಯ್ ಕುಮಾರ್ ,ರಾಮಚಂದ್ರಪ್ಪ, ಹೇಮಂತ್, ಗೋವಿಂದಪ್ಪ, ನಂದೀಶ್ ಎಂಬುವರ ಪೈಕಿ ಇಬ್ಬರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಆದರೆ ಉಳಿದವರನ್ನು ಬಂಧಿಸಿಲ್ಲ. ಅವರನ್ನೂ ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಹಾಗೂ ಹಲ್ಲೆಗೊಳಗಾದ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಎಚ್ಚರಿಕೆ ನೀಡಿದ್ದಾರೆ.
PublicNext
23/09/2022 05:05 pm