ಚಿಕ್ಕಬಳ್ಳಾಪುರ: ನಗರದ ಬಿಬಿ ರಸ್ತೆಯ ಮೂಲಕ ಸರ್.ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣವನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಕಳೆದ ಕೆಲವು ತಿಂಗಳುಗಳ ಹಿಂದೆ ನಿರ್ಮಿಸಿದ್ದ ಸಿಸಿ ರಸ್ತೆಯು ಗುಣಮಟ್ಟವಿಲ್ಲದೇ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಸ್ಥಳಕ್ಕೆ ಖುದ್ದು ಭೇಟಿ ನೀಡಿ ರಸ್ತೆಯ ಗುಣಮಟ್ಟವನ್ನು ಪರಿಶೀಲಿಸಿದರು.
ನಗರದ ಬಿಬಿ ರಸ್ತೆಯಿಂದ ಜಿಲ್ಲಾ ಕ್ರೀಡಾಂಗಣದ ಮೂಲಕ ಕೆಳಗಿನ ತೋಟಗಳು ಬಡಾವಣೆಯನ್ನು (ಎಚ್.ಎಸ್.ಗಾರ್ಡನ್) ಸಂಪರ್ಕಿಸುವ ಮುಖ್ಯ ರಸ್ತೆಗೆ ಕಳೆದ ಕೆಲವು ತಿಂಗಳುಗಳ ಹಿಂದೆ ಸುಮಾರು 77 ಲಕ್ಷ ರೂಗಳ ವೆಚ್ಚದಲ್ಲಿ 650 ಮೀಟರ್ ಉದ್ದದ ಈ ರಸ್ತೆಯನ್ನುಅಭಿವೃದ್ಧಿಪಡಿಸಲಾಗಿತ್ತು. ಈ ರಸ್ತೆಯುಗುಣ ಮಟ್ಟವಿಲ್ಲದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ರಸ್ತೆ ನಿರ್ಮಾಣಕ್ಕೆ ಬಳಸಿರುವ ಕಾಂಕ್ರಿಟ್ ನ ಮಿಶ್ರಣ ಪ್ರಮಾಣ, ಕಾಂಕ್ರಿಟ್ ಸರಾಸರಿ ಪ್ರಮಾಣವನ್ನು ಪರಿಶೀಲಿಸಲು ಕಾಂಕ್ರಿಟ್ ನ್ನು ಪ್ರಯೋಗಾಲಯಕ್ಕೆ ರವಾನಿಸಿ ನಂತರ ವರದಿ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಸಿಸಿ ರಸ್ತೆಯನ್ನು ನಿರ್ಮಿಸಲಾಗಿದೆ. ವಾಹನಗಳು ಹೆಚ್ಚು ಈ ರಸ್ತೆಯ ಮೂಲಕ ಸಂಚರಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಇದನ್ನು ಸಂಪೂರ್ಣವಾಗಿ ಮರುಪರಿಶೀಲಿಸಿ, ವರದಿ ಪಡೆದು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್ ಎಂ ನಾಗರಾಜ್ ಹೇಳಿದರು.
Kshetra Samachara
21/09/2022 03:54 pm