ಚಿಕ್ಕಬಳ್ಳಾಪುರ: ಕಷ್ಟಪಟ್ಟು ರೈತ ಸಾಲ ಮಾಡಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದ. ಆದ್ರೆ, ಈಗ ಬೆಳೆಗೆ ದುಷ್ಕರ್ಮಿಯೋರ್ವ ಬ್ರೂಮರ್ ಟಿಲ್ಲರ್ ನಲ್ಲಿ ಶೇಖರಣೆ ಮಾಡಿಟ್ಟಿದ್ದ ನೀರಿನಲ್ಲಿ ಕಳೆ ನಾಶಕ ಮದ್ದು ಬೆರೆಸಿ ಹೋಗಿದ್ದಾನೆ. ಇದನ್ನು ಅರಿಯದ ರೈತ ತೋಟಕ್ಕೆ ಸಿಂಪಡಣೆ ಮಾಡಿದ್ದಾನೆ. ಪರಿಣಾಮ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೂವಿನ ತೋಟ ಸಂಪೂರ್ಣ ಸುಟ್ಟು ಹೋಗಿದೆ!
ಶ್ರೀನಿವಾಸ್ ಎಂಬುವವರ 3 ಎಕರೆ ತೋಟವಿಡೀ ಸುಟ್ಟು ಕರಕಲಾಗಿದೆ. ರೋಜ್ ಮತ್ತು ಚಾಮಂತಿ ಹೂವಿನ ಸಮೃದ್ಧ ತೋಟ ಇದಾಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹೋಗಿದ್ದು, ರೈತ ಕೈ ಕೈ ಹಿಸುಕಿ ಕೊಳ್ಳುತ್ತಿದ್ದಾನೆ.
ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಾಮಶೇಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ರೈತ ಶ್ರೀನಿವಾಸ್ ಸಾಲ ಮಾಡಿ 2 ಎಕರೆಯಲ್ಲಿ ರೋಜ್, ಒಂದು ಎಕರೆಯಲ್ಲಿ ಚಾಮಂತಿ ಬೆಳೆದಿದ್ದ. ಒಂದು ತಿಂಗಳಿಂದ ಹೂಗಳಿಗೆ ಬೆಂಬಲ ಬೆಲೆ ಸಿಗುತ್ತಿತ್ತು. ಅದೇ ಖುಷಿಯಲ್ಲಿದ್ದ ರೈತ, 2 ದಿನಗಳಿಂದ ತೋಟಕ್ಕೆ ಕೀಟನಾಶಕ ಮದ್ದು ಸಿಂಪಡಣೆ ಮಾಡಲು ತಯಾರಿ ಮಾಡಿಕೊಂಡಿದ್ದ.
ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ರೈತರ ತೋಟಗಳಲ್ಲಿ ಅವಾಂತರ ಮಾಡುತ್ತಿದ್ರೆ, ಇತ್ತ ನೀರು ನುಗ್ಗದ ಜಾಗದಲ್ಲಿ ಬೆಳೆದ ತೋಟವನ್ನು ನಾಶ ಮಾಡಿದ ದುಷ್ಕರ್ಮಿಗೆ ರೈತನ ಕಣ್ಣೀರ ಶಾಪ ತಟ್ಟದಿರದು. ಇಷ್ಟೆಲ್ಲವಾದ್ರೂ ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ಕೊಡದಿರುವುದು ವಿಪರ್ಯಾಸವೇ ಸರಿ.
PublicNext
10/09/2022 08:01 am