ಚಾಮರಾಜನಗರ : ತಾಲೂಕಿನ ಕುದೇರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ನಾಪತ್ತೆ ಸಂಬಂದ ದಾಖಲಾಗಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ವ್ಯಕ್ತಿಯ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
ತಾಲೂಕಿನ ಜನ್ನೂರು ಗ್ರಾಮದ ರಮೇಶ್(45)ಕೊಲೆಯಾದ ವ್ಯಕ್ತಿ. ಅವರ ಪತ್ನಿ ಗೀತಾ ಹಾಗೂ ಗುರುಪಾದಸ್ವಾಮಿ ಬಂಧಿತರು. ರಮೇಶ್ ಹಾಗೂ ಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಪತ್ನಿ ಗೀತಾ ತನ್ನ ಪತಿ ರಮೇಶ ಅವರು ಜ.14 ರಂದು ರಾತ್ರಿ ಹೊರ ಹೋದವರು ಮನೆಗೆ ವಾಪಸ್ಸು ಬಂದಿಲ್ಲ. ಆಗಾಗ್ಗೆ ಹೊರಗೆ ಹೋಗುತ್ತಿದ್ದು ವಾಪಸ್ಸು ಬರುತ್ತಿದ್ದರು. ಆದರೆ, ಅಂದು ರಾತ್ರಿ ಹೊರಗೆ ಹೋದವರು ಮತ್ತೆ ಮನೆಗೆ ಬಂದಿಲ್ಲ ಎಂದು ಜ.21 ರಂದು ಕುದೇರು ಠಾಣೆಗೆ ಆಗಮಿಸಿ ತನ್ನ ಪತಿ ರಮೇಶ ಅವರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು.
ನಾಪತ್ತೆ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಗ್ರಾಮದವರ ಮಾಹಿತಿ ಆಧರಿಸಿ ಗೀತಾಳನ್ನು ವಿಚಾರಣೆ ನಡೆಸಿದ ಪೊಲೀಸರು ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದರು.
ಗೀತಾ ತನ್ನ ಪ್ರಿಯಕರ ಗುರುಪಾದಸ್ವಾಮಿಯೊಂದಿಗೆ ಸೇರಿ ರಮೇಶ್ನನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ಕುಪ್ಪೇಗಾಲ ಬಳಿಯ ಕಪಿಲ ನದಿಯಲ್ಲಿ ಬೀಸಾಡಿ ಬಂದಿದ್ದಾರೆ. ನಂತರ ಯಾರಿಗೂ ಅನುಮಾನ ಬರಬಾರದೆಂದು ನಾಪತ್ತೆ ದೂರು ನೀಡಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಗುರುಪಾದಸ್ವಾಮಿಗೂ ನನಗೂ ಅಕ್ರಮ ಸಂಬಂಧವಿದ್ದು, ಇಬ್ಬರು ಸೇರಿ ಕೊಲೆ ಮಾಡಿ ಕಪಿಲ ನದಿಗೆ ಬೀಸಾಡಿರುವುದಾಗಿ ವಿಚಾರಣೆ ವೇಳೆ ಗೀತಾ ಒಪ್ಪಿಕೊಂಡಿದ್ದಾರೆ. ಪೊಲೀಸರು ಆರೋಪಿಗಳನ್ನು ಕುಪ್ಪೇಗಾಲ ಬಳಿಯ ಕಪಿಲ ನದಿಗೆ ಕರೆದೊಯ್ದು ಮಾಹಿತಿ ಪಡೆದು, ನದಿಯಿಂದ ಮೃತದೇಹವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಾರಸುದಾರರಿಗೆ ನೀಡಿದ್ದಾರೆ. ಸ್ಥಳಕ್ಕೆ ಎಸ್ಪಿ ಡಾ.ಕವಿತಾ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
Kshetra Samachara
03/02/2025 04:54 pm