ನವದೆಹಲಿ: ಮೊಬಿಲಿಟಿ ದೈತ್ಯ ಓಲಾ ಎಲೆಕ್ಟ್ರಿಕ್ ತನ್ನ ಸೆಲ್ ಮತ್ತು ಎಲೆಕ್ಟ್ರಿಕ್ ಕಾರ್ ಕಾರ್ಖಾನೆಗಳನ್ನು ಸ್ಥಾಪಿಸಲು ಭೂಮಿಗಾಗಿ ಹುಡುಕಾಡುತ್ತಿದೆ. ಈ ಸಂಬಂಧ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಾರು ತಯಾರಿಸುವುದಾಗಿ ಹೇಳಿದ್ದ ಓಲಾ ಎಲೆಕ್ಟ್ರಿಕ್‌ನ ಯೋಜನೆಗಳು ಗಂಭೀರ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದ್ದು, ಕೆಲವು ಕಾನ್ಸೆಪ್ಟ್ ಡಿಸೈನ್‌ಗಳೂ ಬಹುತೇಕ ಸಿದ್ಧವಾಗಿವೆ ಎಂದು ತಿಳಿದು ಬಂದಿದೆ.
ಓಲಾ ಎಲೆಕ್ಟ್ರಿಕ್ ತನ್ನ ಸೆಲ್ ಗಿಗಾಫ್ಯಾಕ್ಟರಿ ಮತ್ತು ಎಲೆಕ್ಟ್ರಿಕ್ ಕಾರ್ ಫ್ಯಾಕ್ಟರಿ ಸ್ಥಾಪಿಸಲು 1,000 ಎಕರೆ ಭೂಮಿಗೆ ಹುಡುಕಾಡುತ್ತಿದ್ದು, 10,000 ಕೋಟಿ ರೂ. ಹೂಡಿಕೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಓಲಾ ಫ್ಯಾಕ್ಟರಿ ಸೆಳೆಯಲು ಕೆಲವು ರಾಜ್ಯಗಳು ಸ್ಪರ್ಧೆಗೂ ಇಳಿದಿವೆ ಎಂದು ಈ ವಿಷಯದ ಬಗ್ಗೆ ತಿಳಿದಿರುವವರು ಹೇಳಿದ್ದಾರೆ.
ಕಂಪನಿಯು ಫ್ಯಾಕ್ಟರಿಗಾಗಿ ಭೂಸ್ವಾಧೀನಕ್ಕೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಮುಂದಿನ ತಿಂಗಳ ಆರಂಭದಲ್ಲಿ ಕಂಪನಿಯು ಫ್ಯಾಕ್ಟರಿ ಸ್ಥಾಪನೆಗೆ ಜಾಗ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
PublicNext
27/05/2022 07:54 pm