ಬೆಂಗಳೂರು: ಈಗಲೂ ಬೇಡಿಕೆ ಉಳಿಸಿಕೊಂಡಿರುವ ಮಾರುತಿ ಬಲೆನೊ ಕಾರು ಹೊಸ ಆವೃತ್ತಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾರುತಿ ಸುಝುಕಿ ಇಂಡಿಯಾ ಕಂಪನಿಯ ನಿರ್ದೇಶಕ ಕೆನೆಚಿ ಅಯುಕವಾ ಅವರು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಕಾರನ್ನು ಇಂದು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಮ್ಯಾನುವಲ್ ಆಯ್ಕೆಗಳುಳ್ಳ ಕಾರಿನ ಆರಂಭಿಕ ಬೆಲೆ ₹6.35 ಲಕ್ಷದಿಂದ ₹8.99 ಲಕ್ಷದವರೆಗೆ ಇದೆ. ಹಾಗೂ ಆಟೊಮೆಟಿಕ್ ಆಯ್ಕೆಗಳುಳ್ಳ ಕಾರಿನ ಬೆಲೆ ₹7.69 ಲಕ್ಷದಿಂದ ₹9.49 ಲಕ್ಷದವರೆಗೆ ಇದೆ.
ತೀರಾ ಇತ್ತೀಚಿನ ತಂತ್ರಜ್ಞಾನ ಹಾಗೂ ನವೀನ ವಿನ್ಯಾಸವನ್ನು ಗಮನದಲ್ಲಿಟ್ಟು 2022ರ ವರ್ಷನ್ ಬಲೆನೊ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಆಕರ್ಷಕ ನೋಟ, ಪ್ರೀಮಿಯಂ ಒಳಾಂಗಣ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಲ್ಲಿ 6 ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಹಿಲ್‌ಹೋಲ್ಡ್ ಅಸಿಸ್ಟ್, 360 ಡಿಗ್ರಿ ವೀವ್ ಕ್ಯಾಮೆರಾ, ಆಧುನಿಕ ಮನರಂಜನಾ ವ್ಯವಸ್ಥೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಸಿಸ್ಟಂ ಹಾಗೂ ಅನೇಕ ಸೌಲಭ್ಯಗಳನ್ನು ಕಾರಿನ ಒಳಾಂಗಣದಲ್ಲಿ ನೀಡಲಾಗಿದೆ.
ಈಗಾಗಲೇ ಈ ಕಾರಿಗೆ 25 ಸಾವಿರ ಗ್ರಾಹಕರು ಬುಕಿಂಗ್ ಮಾಡಿದ್ದಾರೆ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ್ ಹೇಳಿದ್ದಾರೆ. ಆಟೊಮೆಟಿಕ್ ಆಯ್ಕೆಯ ಕಾರು ಪ್ರತಿ ಲೀಟರಿಗೆ 22.9 ಕಿಲೋ ಮೀಟರ್ ಇಂಧನ ದಕ್ಷತೆ ಹೊಂದಿದೆ ಎಂದು ಕಂಪನಿಯು ತಿಳಿಸಿದೆ. ಮ್ಯಾನುಯಲ್ ಆಯ್ಕೆ ಕಾರು ಪ್ರತಿ ಲೀಟರಿಗೆ 22.3 ಕಿಲೋ ಮೀಟರ್ ಇಂಧನ ದಕ್ಷತೆ ಹೊಂದಿದೆ ಎಂದು ಕಂಪನಿ ತಿಳಿಸಿದೆ.
PublicNext
23/02/2022 04:55 pm