ನವದೆಹಲಿ: ಸಾಧನೆ ಮಾಡಲು ಉತ್ತಮ ಹಿನ್ನೆಲೆ ಇರಬೇಕಂತೇನಿಲ್ಲ. ಅದಕ್ಕೆ ಸತತ ಪರಿಶ್ರಮದ ದುಡಿಮೆ ಬೇಕು. ಸಮರ್ಪಣಾ ಮನೋಭಾವದ ಕೆಲಸ ಬೇಕು. ಛಲ ಬಿಡದ ಸಂಕಲ್ಪ ಹಾಗೂ ಗಟ್ಟಿ ಮನಸು ಬೇಕು.
ಈ ಮೇಲಿನ ಎಲ್ಲ ಮಾತನ್ನು ಸಾಧಿಸಿ ಸಾಕಾರ ರೂಪಕ್ಕೆ ತಂದಿದ್ದಾರೆ 'ಪೇಟಿಎಂ' (pay through mobile)ಸಂಸ್ಥಾಪಕ ವಿಜಯ್ ಶೇಖರ್. ಹೌದು.. 2010ರಲ್ಲಿ ಶುರುವಾದ ಪೇಟಿಎಂ ಸಂಸ್ಥೆ ಈಗ ಭಾರತದ ಅತಿ ದೊಡ್ಡ 'ಐಪಿಒ'ಗೆ (initial public offering) ಚಾಲನೆ ನೀಡಿದ್ದಾರೆ.
ಪೇಟಿಎಂ ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಷೇರು ಬಿಡುಗಡೆಯ ಮೂಲಕ ಅಂದಾಜು 2.5 ಶತಕೋಟಿ ಡಾಲರ್ (ಸುಮಾರು 18,300 ಕೋಟಿ ರೂ.) ಸಂಗ್ರಹಿಸುವ ಇರಾದೆಯನ್ನು ಹೊಂದಿದೆ. ಅಂದಾಜು 8300 ಕೋಟಿ ರೂ. ಮೌಲ್ಯದ ತಾಜಾ ಷೇರುಗಳನ್ನು ಬಿಡುಗಡೆಗೊಳಿಸಲಿದೆ. 10,000 ಕೋಟಿ ರೂ.ಗಳನ್ನು ಒಎಫ್‌ಎಸ್ ಮೂಲಕ ಬಿಡುಗಡೆಗೊಳಿಸಲಿದೆ.
ವಿಜಯ್ ಶೇಖರ್ ಅವರ ಈ ಸಾಧನೆ ಬಗ್ಗೆ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿರುವ ಉದ್ಯಮಿ ಹರ್ಷ್ ಗೋಯಂಕಾ "ಸಾಧನೆ ಮಾಡಲು ಶ್ರೀಮಂತ ಕುಟುಂಬ ಹಿನ್ನೆಲೆ ಬೇಕಾಗಿಲ್ಲ. ಉತ್ತಮ ಇಂಗ್ಲೀಷ್ ಸಂವಹನ ಜ್ಞಾನವೂ ಬೇಕಿಲ್ಲ. ಸಾಮಾನ್ಯ ಶಿಕ್ಷಕರೊಬ್ಬರ ಮಗನಾಗಿ, ಹಿಂದಿ ಮಾಧ್ಯಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಇಂದು ಭಾರತದ ಬಹುದೊಡ್ಡ 'ಐಪಿಒ' ನಡೆಸುತ್ತಿದ್ದಾರೆ. ಇದು ಇತಿಹಾಸದಲ್ಲೇ ಮೊದಲು" ಎಂದು ಶ್ಲಾಘಿಸಿದ್ದಾರೆ.
PublicNext
10/11/2021 04:08 pm