ಬೆಂಗಳೂರು: ನಿನ್ನೆಯಷ್ಟೇ ಆಟೋ ಮೀಟರ್ ದರ ಏರಿಕೆ ಬೆನ್ನಲ್ಲೇ ತಿಂಡಿಪ್ರಿಯರಿಗೆ, ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ಉಂಟಾಗಿದೆ. ಕರ್ಮಶಿಯಲ್ ಗ್ಯಾಸ್ ರೇಟ್ ಜಾಸ್ತಿ ಆಗಿದೆ. ಹೋಟೆಲ್ ಬಾಡಿಗೆ ಜೊತೆಗೆ ಅಗತ್ಯ ಸಾಮಗ್ರಿ ಬೆಲೆ ಗಗನಕ್ಕೇರಿವೆ. ತೈಲ ಬೆಲೆ ಇಳಿಕೆಯಾದ್ರೂ ಗ್ರಾಹಕರ ಜೇಬಿಗೆ ಹೋಟೆಲ್ ಹೊರೆಯಾಗ್ತಿವೆ.
ಹೋಟೆಲ್ ಗೆ ಹೋಗುವ ಮುನ್ನ ಜೇಬಲ್ಲಿ ಜಾಸ್ತಿ ದುಡ್ಡಿದೆಯಾ ಎಂಬುದನ್ನ ನೋಡಿಕೊಳ್ಳಲೇ ಬೇಕು. ಏಕೆಂದರೆ ತಿಂಡಿ ತುಟ್ಟಿ ಆಗಿದೆ.
* ಯಾವ ತಿಂಡಿ ದರ ಎಷ್ಟೆಷ್ಟಿತ್ತು, ಈಗ ಎಷ್ಟಾಗುತ್ತೆ?
ಮಸಾಲೆ ದೋಸೆ 65 ರಿಂದ 70 ರೂ.ಗೆ ಏರಿಕೆ, ಇಡ್ಲಿ ವಡೆ 35-40 ರೂ., ಕಾಫಿ, ಟೀ 15 ರಿಂದ 20 ರೂ., ಚೌಚೌ ಬಾತ್ 60 ರಿಂದ 70 ರೂ., ಸೌತ್ ಇಂಡಿಯನ್ ಊಟ 85 ರಿಂದ 95 ರೂ., ರೈಸ್ ಬಾತ್ 40 ರಿಂದ 50 ರೂ., ರವಾ ಇಡ್ಲಿ 40 ರಿಂದ 45 ರೂ., ಅಕ್ಕಿ ರೊಟ್ಟಿ 45- 50 ರೂ. ಗೆ ಏರಿಕೆ, ಫ್ರೈಡ್ ರೈಸ್ 100 ರಿಂದ 110 ರೂ., ಗೋಬಿ ಮಂಚೂರಿ ಒಂದು ಪ್ಲೇಟಿಗೆ 100 ರಿಂದ 110 ರೂ., ಪನ್ನೀರ್ ಮಂಚೂರಿ 110 ರಿಂದ 120 ರೂ., ಒಂದು ಪ್ಲೇಟ್ ಪೂರಿ 65 ರಿಂದ 70 ರೂ. ಗೆ ಏರಿಕೆಯಾಗಿದೆ.
ಇಂದಿನಿಂದಲೇ ಬೆಲೆ ಏರಿಕೆ ಮಾಡಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಈ ಬಗ್ಗೆ ಗ್ರಾಹಕರು ಅಸಮಾಧಾನ ಹೊರಹಾಕಿದ್ದು, ಕೇಂದ್ರ, ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಕೋವಿಡ್ ಸಂದರ್ಭ ಎಷ್ಟೋ ಹೋಟೆಲ್ ಗಳು ಮುಚ್ಚಿ ಹೋಗಿವೆ. ಕೆಲ ಹೋಟೆಲ್ ಗಳು ಆಸ್ಪತ್ರೆ, ಮಾಲ್ ಗಳಾಗಿ ಮಾರ್ಪಾಟಾಗಿವೆ. ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿಕೊಂಡಿರೋದು ಒಂದೆಡೆಯಾದ್ರೆ, ಗ್ರಾಹಕರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
PublicNext
09/11/2021 05:40 pm