ಬೆಂಗಳೂರು: ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗಷ್ಟೇ ಅಲ್ಲ. ಈಗ ಹೊಟೇಲ್ ಉದ್ಯಮಿಗಳಿಗೂ ತಟ್ಟಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದಿಢೀರ್ ಹೆಚ್ಚಳವಾಗಿದೆ. ಇದರ ನೇರ ಪರಿಣಾಮ ಹೊಟೇಲ್ ಉದ್ಯಮದ ಮೇಲೆ ತಟ್ಟಿದೆ ಎಂದು ಹೊಟೇಲ್ ಉದ್ಯಮಿಗಳು ಅಸಮಧಾನಿತರಾಗಿದ್ದಾರೆ. ಬರುವ ಜನವರಿ ವೇಳೆಗೆ ಊಟ, ತಿಂಡಿಯ ಬೆಲೆ ಏರಿಸುವ ಕುರಿತು ತೀರ್ಮಾನಿಸಲಿದ್ದೇವೆ ಎಂದು ಬೃಹತ್ ಬೆಂಗಳೂರು ಹೋಟಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ ರಾವ್ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, 1,794 ರು.ಗೆ ಸಿಗುತ್ತಿದ್ದ 19 ಕೆ.ಜಿ. ತೂಕದ ಒಂದು ವಾಣಿಜ್ಯ ಸಿಲಿಂಡರ್‌ನ ಬೆಲೆ ಇದೀಗ 2060 ರು.ಗೆ ಏರಿಕೆಯಾಗಿದೆ. ಇದು ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಹೋಟಲ್ ಉದ್ಯಮವನ್ನು ಮತ್ತಷ್ಟು ಆರ್ಥಿಕ ನಷ್ಟಕ್ಕೆ ತಳ್ಳಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ತೈಲ ಬೆಲೆ ಏರಿಕೆ ನಿಯಂತ್ರಿಸುವಂತೆ ಸಂಘದಿಂದ ಮನವಿ ಮಾಡಿದ್ದೇವೆ ಎಂದರು.
ಮುಂದಿನ ವಾರ ಮತ್ತೊಮ್ಮೆ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಕಾದು ನೋಡುತ್ತೇವೆ. ಜನವರಿ ವೇಳೆಗೆ ಇಂಧನ, ಸಿಲೆಂಡರ್ ದರ ಹತೋಟಿಗೆ ಬಾರದಿದ್ದರೆ ಸಂಘದ ಸದಸ್ಯರ ಜತೆ ಚರ್ಚಿಸಿ ನಂತರ ಊಟ, ತಿಂಡಿ ಬೆಲೆ ಏರಿಸುತ್ತೇವೆ. ಸದ್ಯಕ್ಕೆ ಬೆಲೆ ಏರಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
PublicNext
03/11/2021 10:48 am