ವರದಿ: ರಹೀಂ ಉಜಿರೆ
ಉಡುಪಿ: ಹಿತ್ತಲ ಗಿಡ ಮದ್ದಲ್ಲ ಎಂಬುದು ಹಳೆ ನಾಣ್ಣುಡಿ.ಇದು ನೂರಕ್ಕೆ ನೂರು ಸತ್ಯ ಎಂಬುದು ಪದೇಪದೆ ಸಾಬೀತಾಗುತ್ತಲೇ ಇದೆ.ನಮ್ಮ ಪ್ರತೀ ಮನೆಮನೆಗಳಲ್ಲೂ ದಿನನಿತ್ಯದ ಬ್ರೇಕ್ ಫಾಸ್ಟ್ ಗೆ ಬಳಸುವ ಇಡ್ಲಿ ಗೆ ಅಮೇರಿಕಾದಲ್ಲಿ ಟ್ರೇಡ್ ಮಾರ್ಕ್ ಪಡೆಯಲಾಗಿದೆ ಎಂದರೆ ನೀವು ನಂಬಲೇಬೇಕು!
ಉಡುಪಿ ಇಡ್ಲಿಯ ರುಚಿ ತಿಂದವರಿಗೇ ಗೊತ್ತು. ತನ್ನದೇ ಯೂನಿಕ್ ಟೇಸ್ಟ್ ಹೊಂದಿರುವ ಉಡುಪಿ ಸಾಂಬಾರ್ ಅಥವಾ ತೆಂಗಿನಕಾಯಿ ಚಟ್ನಿ ಜೊತೆಗೆ ತುಂಡು ಇಡ್ಲಿಯನ್ನು ಬಾಯಿಗೆ ಇಟ್ಟರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು...ಅಂತಹ ಫೀಲ್ ಸಿಗುತ್ತೆದೆ. ಇದೀಗ ಉಡುಪಿ ಇಡ್ಲಿಗೆ 12,461ಕಿ. ಮೀ. ದೂರದ ಅಮೆರಿಕದಲ್ಲಿ ಬ್ರ್ಯಾಂಡ್, ಟ್ರೇಡ್ ಮಾರ್ಕಿನ ಗೌರವ, ಸ್ಥಾನಮಾನ ದೊರೆತಿದೆ. ಹೌದು,ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ಉಡುಪಿ ಪ್ಯಾಲೇಸ್ ಹೋಟೆಲ್‌ನವರು ಉಡುಪಿ ಇಡ್ಲಿ ಬ್ರ್ಯಾಂಡ್‍ಗೆ ಟ್ರೇಡ್ ಮಾರ್ಕ್ ಪಡೆದಿದ್ದು ಆನ್‍ಲೈನ್ ಮೂಲಕ ವ್ಯವಹಾರ ನಡೆಯುತ್ತಿದೆ. ರೆಡಿ ಟು ಈಟ್ ಉದ್ದಿನ ಇಡ್ಲಿ, ರವೆ ಇಡ್ಲಿ, ಪ್ಯಾಕೆಟ್ ನಲ್ಲಿ ಚಟ್ನಿ, ಸಾಂಬಾರ್ ನ್ನು ಭಾರತೀಯರು, ಅಮೆರಿಕನ್ನರು ಮೈಕ್ರೊ ಓವನ್‍ನಲ್ಲಿ ಬಿಸಿ ಮಾಡಿ ತಿಂದು ಖುಷಿಪಡುತ್ತಿದ್ದಾರೆ.ಕಾಲು ಕೆ.ಜಿ.(ಆರು) ಇಡ್ಲಿಗೆ 1.99ಡಾಲರ್(150ರೂ.), 24ಇಡ್ಲಿಗಳ ಫ್ಯಾಮಿಲಿ ಪ್ಯಾಕಿಗೆ 4.99ಡಾಲರ್(375ರೂ.) ದರವಿದ್ದು ಹಾಟ್ ಕೇಕ್ ನಂತೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.ಬ್ರ್ಯಾಂಡ್, ಟ್ರೇಡ್ ಮಾರ್ಕ್ ಆಯಾ ದೇಶಕ್ಕೆ ಸೀಮಿತವಾಗಿದ್ದರೂ ಜಾಗತಿಕ ಒಪ್ಪಂದಕ್ಕೆ ಅನುಗುಣವಾಗಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆಯೂ ಇದೆ.ಇದಕ್ಕೆ ಯಾವ ಅಭ್ಯಂತರವೂ ಇಲ್ಲ.ಆದರೆ ಎಲ್ಲ ಬಗೆಯ ಪೋಷಕಾಂಶಗಳನ್ನು ಹೊಂದಿರುವ ಇಡ್ಲಿ ಮೂಲ ಸ್ವರೂಪದಲ್ಲಿ ಇಲ್ಲಿನವರಿಗೂ ಸಿಗುವಂತಾಗಬೇಕು.ಇದೇ ರೀತಿ ಹಲವು ಪೋಷಕಾಂಶಗಳಿಂದ ತುಂಬಿರುವ ಭಾರತೀಯ ಸಾಂಪ್ರದಾಯಿಕ ತಿನಿಸುಗಳಿಗೆ ನಾವು ಕೂಡ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ ಉಡುಪಿಯ ಖ್ಯಾತ ವೈದ್ಯ ,ಹಲವು ದೇಶಗಳಿಗೆ ಪ್ರವಾಸ ಮಾಡಿ ಬಂದಿರುವ ಡಾ.ಕಿರಣ್ ಆಚಾರ್ಯ
ಭಾರತ ಮೂಲದ ಹಲವಾರು ಆಹಾರ ಖಾದ್ಯಗಳಿಗೆ ಅನ್ಯ ರಾಷ್ಟ್ರಗಳು ಟ್ರೇಡ್ ಮಾರ್ಕ್ ಪಡೆಯುತ್ತಿವೆ . ಈ ಕುರಿತಾದ ಅನೇಕ ವಿವಾದಗಳು ಕೋರ್ಟ್ ನಲ್ಲೂ ಇವೆ. ಇಷ್ಟಾದರೂ ಇದು ನಮ್ಮದೆನ್ನುವ ಅಭಿಮಾನದ ಪ್ರದರ್ಶನ ನಮ್ಮಲ್ಲಿ ನಡೆದಿಲ್ಲ. ವಿಶ್ವಾದ್ಯಂತ ಉಡುಪಿ ಹೋಟೆಲುಗಳು ಜನಪ್ರಿಯತೆಯನ್ನು ಪಡೆದಿದ್ದರೂ, ನೆಟ್ಟಗೆ ಉಡುಪಿಯಲ್ಲಿ ಒಂದು ಉತ್ತಮ ಮೂಲ ಆಹಾರ ನೀಡುವ ಹೋಟೆಲು ಸಿಗುವುದಿಲ್ಲ. ನಮ್ಮ ಆಹಾರ ಪದ್ಧತಿಯ ಬಗೆಗಿನ ಅಭಿಮಾನ ಶೂನ್ಯತೆ ನಿಜಕ್ಕೂ ದುರದೃಷ್ಟಕರ.
PublicNext
03/10/2021 09:30 am