ಬೆಳಗಾವಿ: ಯಾವ ಉದ್ಯಮವೂ ಸುಲಭವಲ್ಲ. ಯಾವ ಕೌಶಲ್ಯವೂ ಸುಲಭವಾಗಿ ಒಲಿಯುವಂತದ್ದಲ್ಲ. ಕಮರ್ಶಿಯಲ್ ಜಗತ್ತಿನಲ್ಲಿ ಸಾಮಾನ್ಯರು ಬದುಕಬೇಕಾದರೆ ದಿನ ಬೆಳಗಾದರೆ ತಮ್ಮ ಕಾಯಕದೊಂದಿಗೆ ಹೋರಾಡಬೇಕು. ಅದರೊಳಗೆ ಮುಳುಗಿ ಪ್ರತಿ ಗಳಿಗೆಗೂ ಪಳಗಬೇಕು. ಇಲ್ಲಿ ದಣಿವರಿಯದೇ ದುಡಿದವರು ಗೆಲ್ಲುತ್ತಾರೆ. ಸೋಮಾರಿಗಳು ಮೂಲೆಗುಂಪಾತ್ತಾರೆ.
ದೇಶಪಾಂಡೆ ಫೌಂಡೇಶನ್ ಸಣ್ಣ ಉದ್ದಿಮೆದಾರರ ಸಂಚಿಕೆಯಲ್ಲಿ ಇವತ್ತು ಅಗರಬತ್ತಿ ಉದ್ಯಮಿ ಪ್ರಸಾದ್ ತೇವರೆ ಅವರ ಬಗ್ಗೆ ತಿಳಿಯೋಣ. ಬೆಳಗಾವಿಯ ಶಾಸ್ತ್ರಿನಗರದಲ್ಲಿ ಗೃಹ ಕೈಗಾರಿಕೆ ನಡೆಸುತ್ತಿರುವ ಇವರು ಶ್ರಮಪಟ್ಟು ಮುಂದೆ ಬಂದವರು. ಇವರ ಉದ್ಯಮ ಒಂದು ಹಂತಕ್ಕೆ ಬಂತೆನ್ನುವಷ್ಟರಲ್ಲಿ ಮಹಾಮಾರಿ ಕೊರೊನಾ ವಕ್ಕರಿಸಿದೆ. ಆದರೂ ಧೃತಿಗೆಡದೇ ಮನೆಯಿಂದಲೇ ಬೇಡಿಕೆಗೆ ತಕ್ಕಷ್ಟು ಅಗರಬತ್ತಿ ಉತ್ಪಾದಿಸಿದ ಪ್ರಸಾದ್ ಅವರು ಇಂದು ಹತ್ತಾರು ಜನರಿಗೆ ಕೆಲಸ ಕೊಡುವಷ್ಟು ಬೆಳೆದು ನಿಂತಿದ್ದಾರೆ.
ಲಕ್ಷ್ಮೀ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಅಗರಬತ್ತಿ ತಯಾರಿಕೆ ಉದ್ಯಮ ಆರಂಭಿಸಿದ ಪ್ರಸಾದ್ ಅವರಿಗೆ ಅಷ್ಟಾಗಿ ವ್ಯಾವಹಾರಿಕ ಜ್ಞಾನ, ಮಾರ್ಕೆಟಿಂಗ್ ತಂತ್ರಗಳು ಗೊತ್ತಿರಲಿಲ್ಲ. ತಮ್ಮ ಉತ್ಪನ್ನಕ್ಕೆ ಹೇಗೆ ಬೇಡಿಕೆ ಹೆಚ್ಚಿಸಿಕೊಳ್ಳಬೇಕೆಂಬ ಬಗ್ಗೆಯೂ ಅವರಿಗೆ ಜ್ಞಾನದ ಕೊರತೆ ಇತ್ತು. ಈ ಎಲ್ಲ ವಿಚಾರಗಳಲ್ಲಿ ಉದ್ಯಮಿ ಪ್ರಸಾದ್ ಅವರ ಬೆನ್ನಿಗೆ ನಿಂತಿದ್ದು ದೇಶಪಾಂಡೆ ಫೌಂಡೇಶನ್. ಅದನ್ನ ಅವರೇ ಹೇಳ್ತಾರೆ ಕೇಳಿ.
ಯಾವುದೇ ದೇವರ ಪೂಜೆ ನಡೆದರೂ ಅದಕ್ಕೊಂದು ಕಳೆ ಮತ್ತು ಅರ್ಥ ಬರಬೇಕಾದರೆ ಅಲ್ಲಿ ಅಗರಬತ್ತಿಯ ಸುಗಂಧ ಆವರಿಸಿರಬೇಕು. ಹೀಗಾಗಿ ಗ್ರಾಹಕರ ಬೇಡಿಕೆ ಹಾಗೂ ಬಯಕೆಯನ್ನು ಅರ್ಥೈಸಿಕೊಂಡು ಸುಗಂಧ ಸೂಸುವ ಅಗರಬತ್ತಿ ತಯಾರಿಸುತ್ತಿದೆ ಪ್ರಸಾದ್ ತೇವರೆ ಅವರ ತಂಡ. ಸದ್ಯ ಗೋವಾ, ಮಹಾರಾಷ್ಟ್ರ ಹಾಗೂ ನೆರೆ ಹೊರೆಯ ಜಿಲ್ಲೆಗಳಲ್ಲೂ ಇವರ ಉತ್ಪನ್ನ ಮಾರಾಟವಾಗುತ್ತಿದೆ. ಈ ಯಶಸ್ಸಿನ ಹಿಂದೆ ಬೆನ್ನೆಲುಬಾಗಿ ನಿಂತಿದ್ದು ದೇಶಪಾಂಡೆ ಫೌಂಡೇಶನ್ ಎಂದು ಹೆಮ್ಮೆಯಿಂದ ಹೇಳ್ತಾರೆ ಪ್ರಸಾದ್ ತೇವರೆ
ಎಲ್ಲವೂ ಕೈ ಮೀರಿದ ಮೇಲೂ ಏನಾದರೊಂದು ಆಸರೆ ಇದ್ದೇ ಇರುತ್ತದಂತೆ. ಆ ಆಸರೆಯನ್ನು ಗುರುತಿಸಿ ಕೈ ಹಿಡಿದು ಮೇಲೆದ್ದರೆ ನಾವೂ ಕೂಡ ಯಶಸ್ವಿ ಉದ್ಯಮಿ ಆಗಬಹುದು ಅನ್ನೋದಕ್ಕೆ ಲಕ್ಷ್ಮೀ ಎಂಟರ್‌ಪ್ರೈಸಸ್‌ನ ಪ್ರಸಾದ್ ಅವರೇ ಉತ್ತಮ ಉದಾಹರಣೆ ಅಲ್ಲವೇ?
ದೇಶಪಾಂಡೆ ಫೌಂಡೇಶನ್ ಸಣ್ಣ ಉದ್ದಿಮೆಗಳ ಮಾಹಿತಿಗಾಗಿ ಸಂಪರ್ಕಿಸಿ +91 77609 65490
PublicNext
22/07/2022 12:02 pm