ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಅಕಾಲಿಕ ನಿಧನವು ವಾಣಿಜ್ಯ ಮತ್ತು ಉದ್ಯಮ ಲೋಕಕ್ಕೆ ದೊಡ್ಡ ನಷ್ಟ ತಂದಿದೆ. ಸೈರಸ್ ಮಿಸ್ತ್ರಿ ತಮ್ಮ ಮರ್ಸಿಡಿಸ್ ಕಾರಿನಲ್ಲಿ ನಿನ್ನೆ (ಸೆಪ್ಟೆಂಬರ್ 4ರಂದು) ಅಹ್ಮದಾಬಾದ್‌ನಿಂದ ಮುಂಬೈಗೆ ತೆರಳುತ್ತಿದ್ದರು. ಅವರ ಪರಿಚಯದ ಸ್ತ್ರೀರೋಗ ತಜ್ಞೆ ಚಾಲನೆ ಮಾಡುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಿಸ್ತ್ರಿ ಸೀಟ್ ಬೆಲ್ಟ್ ಹಾಕದ ಕಾರಣ ಏರ್ ಬ್ಯಾಗ್ ಓಪನ್ ಆಗಿರಲಿಲ್ಲ. ಇದರಿಂದಾಗಿ ಮಿಸ್ತ್ರಿ ತಲೆಗೆ ಬಲವಾದ ಪಟ್ಟುಬಿದ್ದು ಸಾವನ್ನಪಿದ್ದಾರೆ. ಈ ದುರ್ಘಟನೆಯಲ್ಲಿ ಮತ್ತೊಬ್ಬರು ಮೃತಪಟ್ಟರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅತಿಯಾದ ವೇಗದ ಕಾರು ಚಾಲನೆಯೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಟಾಟಾ ಗ್ರೂಪ್‌ನಲ್ಲಿ ಅತಿದೊಡ್ಡ ಷೇರುದಾರ (ಶೇ.18 ಅಂದ್ರೆ 29 ಬಿಲಿಯನ್ ಡಾಲರ್ ಅಥವಾ 2.32 ಲಕ್ಷ ಕೋಟಿ ರೂ.) ಹೂಡಿಕೆ ಹೊಂದಿರುವ ಶಾಪೂರ್ಜಿ ಪಲ್ಲೋಂಜಿ ಸಮೂಹದ ಅಧ್ಯಕ್ಷರಾಗಿದ್ದ ಪಲ್ಲೋಂಜಿ ಮಿಸ್ತ್ರಿ ಅವರ ನಾಲ್ವರು ಮಕ್ಕಳಲ್ಲಿ ಸೈರಸ್ ಮಿಸ್ತ್ರಿ ಕೂಡ ಒಬ್ಬರು. ಇತ್ತೀಚೆಗಷ್ಟೇ ಪಲ್ಲೋಂಜಿ ಮಿಸ್ತ್ರಿ ನಿಧನ ಹೊಂದಿದ್ದರು. ಈ ಬೆನ್ನಲ್ಲೇ ಸೈರಸ್ ಮಿಸ್ತ್ರಿ ಸಾವನ್ನಪ್ಪಿರುವುದು ಮಿಸ್ತ್ರಿ ಕುಟುಂಬಕ್ಕೆ ಆಘಾತ ತಂದೊಡ್ಡಿದೆ.
ಸೈರ್ ಮಿಸ್ತ್ರಿ ಒಂದು ಕಾಲದಲ್ಲಿ ರತನ್ ಟಾಟಾ ಅವರ ನೀಲಿ ಕಣ್ಣಿನ ಹುಡುಗ. ಆದರೆ ಅವರಿಂದಲೇ ಟಾಟಾ ಗ್ರೂಪ್‌ನಿಂದ ವಜಾಗೊಂಡಿದ್ದು ವಿಪರ್ಯಾಸವೇ ಸರಿ. ಕಾರಣ ಕೆಲವೊಂದು ಮಹತ್ವದ ನಿರ್ಧಾರದಲ್ಲಿ ಟಾಟಾ ಗ್ರೂಪ್ ನಿರ್ದೇಶಕರೊಂದಿಗೆ ಮಿಸ್ತ್ರಿ ಭಿನ್ನಾಭಿಪ್ರಾಯ ಹೊಂದಿದ್ದರು. ಅದರಲ್ಲೂ ವಿಸ್ತಾರ ಮತ್ತು ಏರ್ ಏಷ್ಯಾ ಇಂಡಿಯಾ ಇದರಲ್ಲಿ ಟಾಟಾ ಸಮೂಹ ಹೂಡಿಕೆ ಮಾಡುವುದನ್ನು ಮಿಸ್ತ್ರಿ ವಿರೋಧಿಸಿದ್ದರು. ಆದರೆ ವಿಮಾನಯಾನ ವಲಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರತನ್ ಟಾಟಾ ಮಿಸ್ತ್ರಿಯನ್ನು ವಜಾ ಮಾಡಲು ನಿರ್ಧರಿಸಿದ್ದರು. ಅದರಿಂದಲೇ ಮಿಸ್ತ್ರಿ ಅವರನ್ನು 2016 ಅಕ್ಟೋಬರ್ 24ರಂದು ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿ ಗೊಳಿಸಲಾಯಿತು. ಈ ಬೆಳವಣಿಗೆ ಬೆನ್ನಲ್ಲೇ ರತನ್ ಟಾಟಾ ಮತ್ತೆ ಗುಂಪಿನ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇದರ ವಿರುದ್ಧ ಸೈರಸ್ ಮಿಸ್ತ್ರಿ ಕಾನೂನು ಹೋರಾಟ ನಡೆಸಿ ಕೊನೆಗೆ ತಮ್ಮ ಕುಟುಂಬದ ವ್ಯವಹಾರಗಳತ್ತ ಗಮನ ನೀಡಿದರು.
ವಿಶೇಷವೆಂದರೆ ಟಾಟಾ ಮನೆತನಕ್ಕೆ ಸೇರದ ವ್ಯಕ್ತಿಯೊಬ್ಬರು ಟಾಟಾ ಗ್ರೂಪ್ ಮುಖ್ಯಸ್ಥರಾದ ಎರಡನೇ ವ್ಯಕ್ತಿ ಮಿಸ್ತ್ರಿ ಆಗಿದ್ದರು. ಅಷ್ಟೇ ಅಲ್ಲದೇ ಮಿಸ್ತ್ರಿ ಅವರು ಟಾಟಾ ಗ್ರೂಪ್ ಅನ್ನು ಮುನ್ನಡೆಸಿದ ಮೊದಲ ಭಾರತೀಯರಲ್ಲದ ಪ್ರಜೆಯಾಗಿದ್ದಾರೆ.
PublicNext
05/09/2022 06:22 pm