ಬೀದರ್‌ನ ಮಾರ್ಕೆಟ್ ಠಾಣೆ ಪೊಲೀಸರು ದೀನ್ ದಯಾಳ್ ನಗರದಲ್ಲಿ ಗಾಂಜಾ, ನಶೆ ಬರುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಮೂವರನ್ನು ಬಂಧಿಸಿದ್ದಾರೆ.
ದೀನ್ ದಯಾಳ್ ನಗರದ ಸಾಯಿನಾಥ್, ಮೋಸಿನ್ ಹಾಗೂ ಮಹಿಳೆಯೊಬ್ಬರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
'32 ಸಾವಿರ ರೂಪಾಯಿ ಮೌಲ್ಯದ 100 ಎಂ.ಎಲ್.ನ 169 'ಕಫ್ ಸಿರಪ್', 4 ಸಾವಿರ ರೂಪಾಯಿ ಮೌಲ್ಯದ 59 ಸಣ್ಣ ಗಾಂಜಾ ಪ್ಯಾಕೆಟ್‌ಗಳು, 1,382 ರೂ ಮೌಲ್ಯದ ಗುಳಿಗೆಗಳು, 6 ಸಾವಿರದ ರೂ ಮೌಲ್ಯ ಮೂರು ಮೊಬೈಲ್, 10 ಸಾವಿರ ರೂಪಾಯಿ ಮೌಲ್ಯದ ಒಂದು ಬೈಕ್ ಸೇರಿದಂತೆ ಒಟ್ಟು 54 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ನಗರದಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
'ಸಾಯಿನಾಥ್ ಹಾಗೂ ಮೋಸಿನ್ ದೀನ್ ದಯಾಳ್ ನಗರದಲ್ಲಿ ನಶೆ ಬರುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಯಿತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅದೇ ಬಡಾವಣೆಯ ಮನೆಯಲ್ಲಿ ಸಂಗ್ರಹಿಸಿ ಇಡಲಾಗಿದ್ದ ಗಾಂಜಾ, ನಶೆಯ ವಸ್ತುಗಳನ್ನು ಜಪ್ತಿ ಮಾಡಿ, ಅಲ್ಲಿದ್ದ ಮಹಿಳೆಯೊಬ್ಬರನ್ನು ವಶಕ್ಕೆ ಪಡೆಯಲಾಯಿತು. ಇದರ ಮುಖ್ಯ ಆರೋಪಿ ಭರತ್ ತಲೆಮರೆಸಿಕೊಂಡಿದ್ದಾನೆ. ಭರತ್‌ನನ್ನು ಈ ಹಿಂದೆಯೂ ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು' ಎಂದು ಮಾಹಿತಿ ಹಂಚಿಕೊಂಡರು.
ಸಾರ್ವಜನಿಕ ಸ್ಥಳದಲ್ಲಿ ಯಾರೇ ನಶೆ ಬರುವ ವಸ್ತು, ಗಾಂಜಾ ಮಾರಾಟ ಅಥವಾ ಸಾಗಾಟ ಮಾಡುವುದು ಕಂಡು ಬಂದರೆ ಜನರು ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹವರ ಹೆಸರು ಗೌಪ್ಯವಾಗಿಡಲಾಗುವುದು. ನಶೆಮುಕ್ತ ಜಿಲ್ಲೆ ನಮ್ಮ ಗುರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ, ಸುನೀಲ್ ಕೊಡ್ಲಿ ಹಾಜರಿದ್ದರು.
PublicNext
25/10/2024 08:15 pm