ಬಳ್ಳಾರಿ: ನಗರದ ದೊಡ್ಡನಗೌಡ ರಂಗಮಂದಿರದ ಮುಂದಿನ ಬುಡಾ ಉದ್ಯಾನವನದ ಮೂಲೆಯಲ್ಲಿ ಅನುಮತಿ ಇಲ್ಲದೇ 2023 ರ ಮಾರ್ಚ್ ನಲ್ಲಿ ರಾತ್ರೋ ರಾತ್ರಿ ಪ್ರತಿಷ್ಟಾಪನೆ ಮಾಡಿದ್ದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಇಂದು ಬೆಳಗಿನ ಜಾವ ಉದ್ಘಾಟನೆ ಮಾಡಿ, ಮಧ್ಯಾಹ್ನದ ವೇಳೆಗೆ ಮತ್ತೆ ಈ ಮೊದಲಿನಂತೆ ಪ್ಲಾಸ್ಟಿಕ್ ಕವರ್ ನಿಂದ ಪಾಲಿಕೆ ಸಿಬ್ಬಂದಿ ಮುಚ್ಚಿದ ಘಟನೆ ನಡೆದಿದೆ.
ಈ ವೇಳೆ ಹಾಗೇ ಇರಲಿ, ಮುಚ್ಚಬೇಡಿ ಎಂದು ಒಂದು ಬಣ ಮತ್ತೊಂದು ಬಣ ಗಣ್ಯರನ್ನು ಆಹ್ವಾನಿಸದೇ ಕದ್ದು ಮುಚ್ಚಿ ಮಾಡುವುದು ಬೇಡ ಎಂದು ವಾಗ್ವಾದ ನಡೆಯಿತು. ಪೊಲೀಸರು ಅವರನ್ನು ನಿಯಂತ್ರಿಸಿ ಅಲ್ಲಿಂದ ಕಳುಹಿಸಿದರು.
ಕಳೆದ 2023 ರ ಮಾರ್ಚ್ ನಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಈ ಪ್ರತಿಮೆಯನ್ನು ಸಿದ್ದಪಡಿಸಿದ್ದರು. ಇದನ್ನು ಇಲ್ಲಿ ಪಾಲಿಕೆ, ಸರ್ಕಾರ ಅಷ್ಟೇ ಅಲ್ಲದೆ. ಉದ್ಯಾನವನದ ಬುಡಾ ಅವರ ಸಮ್ಮತಿಯೂ ಇಲ್ಲದೆ ರಾತ್ರೋ ರಾತ್ರಿ ಪ್ರತಿಷ್ಟಾಪನೆ ಮಾಡಲಾಗಿತ್ತು. ಇದಕ್ಕೆ ಪಾಲಿಕೆ ಮತ್ತು ಬುಡಾ ಆಕ್ಷೇಪಣೆ ಎತ್ತಿತ್ತು. ಇದೇ ವೇಳೆಯಲ್ಲಿ ಚುನಾವಣಾ ನೀತಿ ಸಂಹಿತೆ ಬಂದಿದ್ದರಿಂದ ಪ್ರತಿಮೆಯ ಅನಾವರಣ ನೆನೆಗುದಿಗೆ ಬಿದ್ದಿತು.
ಹಾಲು ಮತದ ಸಮುದಾಯದ ಮುಖಂಡರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆದು ಪ್ರತಿಮೆ ಅನಾವರಣ ಮಾಡುವುದಾಗಿ ಹೇಳಿದ್ದರು. ಇಂದು ಕನಕದಾಸರ ಜಯಂತಿಯಂದು ಬೆಳಿಗ್ಗೆ ಸಮುದಾಯದ ಕೆಲ ಮುಖಂಡರು ಪ್ರತಿಮೆ ಅನಾವರಣ ಮಾಡಿ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಮೆ ರಚನೆಗೆ ಆರ್ಥಿಕವಾಗಿ ಸಹಕಾರ ನೀಡಿದ್ದಾರೆ ಎನ್ನಲಾದ ಶ್ರೀರಾಮುಲು ಅವರನ್ನು ಕರೆದು ಪುಷ್ಪ ನಮನ ಸಲ್ಲಿಸಲಾಗಿದೆ. ಜೊತೆಗೆ ಸಂಸದ ಇ.ತುಕರಾಂ, ವಿಧಾನ ಪರುಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜ್ ಮೊದಲಾದವರು ಬಂದು ನಮನ ಸಲ್ಲಿಸಿದ್ದಾರೆ.
ಆದರೆ ಈ ಪ್ರದೇಶದ ಶಾಸಕರಾದ, ಮಾಜಿ ಸಚಿವ ಬಿ.ನಾಗೇಂದ್ರ ಅವರಿಗಾಗಲಿ, ನಗರ ಶಾಸಕ ಭರತ್ ಅವರಿಗಾಗಲಿ ಈ ಬಗ್ಗೆ ಮಾಹಿತಿ ನೀಡಿರಲಿಲ್ಲವೆಂದು ತಿಳಿದುಬಂದಿದೆ.ಇದೆಲ್ಲ ನಡೆಯುವ ವೇಳೆಗೆ ಪ್ರತಿಮೆ ಅನಾವರಣ ಮಾಡಿದ್ದು ಸರಿಯಲ್ಲವೆಂದು ಪೊಲೀಸರ ಬಂದೋ ಬಸ್ತಿನೊಂದಿಗೆ ಪಾಲಿಕೆ ಸಿಬ್ಬಂದಿ ಬಂದು ಮತ್ತೆ ರಾಯಣ್ಣನ ಪ್ರತಿಮೆಗೆ ಪ್ಲಾಸ್ಟಿಕ್ ಮತ್ತು ಬಟ್ಟೆ ಸುತ್ತಿದ್ದಾರೆ.
ಬ್ರಿಟೀಷರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ಈ ಮಹಾನ್ ವ್ಯಕ್ತಿಯ ಪ್ರತಿಮೆಯ ಅನಾವರಣ ಕಾರ್ಯ ಈ ರೀತಿ ಆಗಿದ್ದು ಮಾತ್ರ ಹಾಲು ಮತದ ಸಮುದಾಯದಲ್ಲಿ ಮತ್ತು ನಗರದ ಜನತೆಯಲ್ಲಿ ನೋವನ್ನು ಮೂಡಿಸಿರುವುದಂತು ಸತ್ಯ.
ವರದಿ : ಹೊನ್ನುರಸ್ವಾಮಿ ಕೆ. ಟಿ.
ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ.
PublicNext
18/11/2024 07:26 pm