ಗ್ರಾಮ ಪಂಚಾಯತಿ ಕಚೇರಿಯಲ್ಲಿಯೇ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿರಾಯ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು, ಗ್ರಾಮ ಪಂಚಾಯತಿ ಕಾನೂನು ಉಲ್ಲಂಘಿಸಿ ದರ್ಬಾರ್ ನಡೆಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮ ಪಂಚಾಯತಿಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸವಿತಾ ಅಪ್ಪಾಸಾಬ ಚೌಗಲಾ ಅವರ ಪತಿ ಅಪ್ಪಾಸಾಬ ಚೌಗಲಾ ಅವರು ಪಂಚಾಯಿತಿ ಕಾರ್ಯಾಲಯದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಈ ಭರ್ಜರಿ ಬರ್ತ್ ಡೇಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಕೂಡಾ ಸಾಥ್ ನೀಡಿದ್ದಾರೆಂದು ತಿಳಿದುಬಂದಿದೆ.
ಗ್ರಾಮ ಪಂಚಾಯತಿಯಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಬಿಟ್ಟು ಬೇರೆಯವರು ಹಸ್ತಕ್ಷೇಪ ಮಾಡಬಾರದು ಎಂಬ ನ್ಯಾಯಾಲಯದ ಆದೇಶವಿದ್ದರೂ ಸಹ ಕಾನೂನು ಉಲ್ಲಂಘನೆ ಮಾಡಿ ಸಿಬ್ಬಂದಿಯೇ ಅವರ ಜೊತೆಗೂಡಿ ಹುಟ್ಟುಹಬ್ಬ ಆಚರಣೆ ಮಾಡುವ ಹಂತಕ್ಕೆ ಹೋಗಿದ್ದು ವಿಪರ್ಯಾಸ !.
ಮಾಧ್ಯಮದವರು ಈ ಕಾನೂನು ಉಲ್ಲಂಘನೆಯನ್ನು ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಮನಕ್ಕೆ ತಂದರೂ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿರುವ ಶೇಖರ ಕರಬಸಪ್ಪಗೋಳ ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಅಥಣಿಯಲ್ಲಿ ಭಾರೀ ಚರ್ಚೆ ಹುಟ್ಟುಹಾಕಿರುವ ಈ ಘಟನೆಗೆ ಜಿಲ್ಲಾ ಪಂಚಾಯತಿ ಇಓಎಚ್ ವಿ ದರ್ಶನ್ ಅವರು ಪೂರ್ಣ ತನಿಖೆ ಮಾಡಿ, ಅಧ್ಯಕ್ಷೆಯ ಸದಸ್ಯತ್ವ ರದ್ದು ಮಾಡಬೇಕೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
PublicNext
22/09/2022 01:08 pm