ಬೆಳಗಾವಿ: ಯಡಿಯೂರಪ್ಪನವರನ್ನು ತೊಗೊಂಡು ತಿರುಗಾಡಿದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನೀವು ಲಗಾ ಒಗಿತೀರಿ ಎಂದು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದ್ದಾರೆ.
ಶುಕ್ರವಾರ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಪ್ರಥಮ ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಿದ್ದೇನೆ ಎಂದು ಯಡಿಯೂರಪ್ಪ ಹೇಳಿಕೆ ನೀಡುತ್ತಾರೆ. ಬೊಮ್ಮಾಯಿ ಅವರೇ ಯಡಿಯೂರಪ್ಪನ್ನು ಕರೆದುಕೊಂಡು ಪ್ರವಾಸ ಮಾಡಿದರೆ ಕರ್ನಾಟಕದಲ್ಲಿ ಬಿಜೆಪಿ ಲಗಾ ಹೊಡೆಸುತ್ತೀರಿ. ಮೊನ್ನೆ ವಿಧಾನಸೌಧದಲ್ಲಿ ನಾನು ಪಂಚಮಸಾಲಿ ವಿರೋಧಿ ಅಲ್ಲ ಎನ್ನುವ ಯಡಿಯೂರಪ್ಪ ಯಾಕೆ ಪಂಚಮಸಾಲಿಗೆ ಮೀಸಲಾತಿ ಕೊಡಲಿಲ್ಲ? ಎಂದು ಹರಿಹಾಯ್ದರು.
ಸಣ್ಣ ಮರಿ ಇದ್ದಾಗ ಹುಲಿಯು ಕುರಿ ಜೊತೆ ಸೇರಿ ಕುರಿಯಾಗಿತ್ತು. ಒಂದ ಸಲಾ ಹುಲಿ ಬಂದು ಅಲ್ಲೋ ನೀನು ಹುಲಿ ಅದಿ ಎಂದು ಕೆರಿ ಒಳಗ ತೋರಿಸಿದಾಗ ಅವಾಗ ಅದು ಘರ್ಜನೆ ಮಾಡಿದ ಹಾಗೆ ಈಗ ಅರಭಾವಿ ಮತಕ್ಷೇತ್ರದ ಪಂಚಮಸಾಲಿ ಸಮಾಜದವರು ಹೊರ ಬಂದಿದ್ದಾರೆ ಎಂದರು.
ನಾವು 2 ಎ ಮೀಸಲಾತಿ ಪಡೆದೇ ಪಡೆಯುತ್ತೇವೆ. ಎಲ್ಲರೂ ಒಂದಾದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ನಮ್ಮ ಸಮಾಜವರು ಹೆದರುವ ಅವಶ್ಯಕತೆ ಇಲ್ಲ. ಯಾರಿಗೂ ಅಪ್ಪಾಜಿ ಅನ್ನುವ ಅವಶ್ಯಕತೆ ಇಲ್ಲ. ಪಂಚಮಸಾಲಿ ಸಮಾಜದ ಇಬ್ಬರಿಗೆ ಸಚಿವ ಸ್ಥಾನ ನೀಡಿದ್ದಾರೆ. ಅವಾ ಯಾರೋ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡತ್ತಾನಂತೆ. ಮೊದಲು ಬೆಳಗಾವಿ ಹಾಗೂ ಹುಬ್ಬಳ್ಳಿದ ಮಾಡೊ ಮಾರಾಯಾ ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಹರಿಹಾಯ್ದರು. ಬೊಮ್ಮಾಯಿ ಅವರೇ ಯಡಿಯೂರಪ್ಪನ ತೊಗೊಂಡ ತಿರುಗಾಡಿದ್ರೆ ನೀವೂ ಲಗಾ ಒಗಿತೀರಿ ಎಂದು ಸಿಎಂ ಬೊಮ್ಮಾಯಿಗೆ ಯತ್ನಾಳ ಎಚ್ಚರಿಕೆಯ ಮಾತುಗಳನ್ನಾಡಿದರು.
PublicNext
08/10/2022 09:00 am