ಬೆಳಗಾವಿ: ಗಡಿಭಾಗದಲ್ಲಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕೊಠಡಿಗಳ ನಿರ್ಮಾಣ ಮಾಡುವಂತೆ ಆಗ್ರಹಿಸಿ ಖಾನಾಪೂರ ತಾಲೂಕಿನಲ್ಲಿ ಲಿಂಗನಮಠ ಗ್ರಾಮಸ್ಥರು ಸೇರಿದಂತೆ ಶಾಲಾ ಮಕ್ಕಳು ಏಕಾಏಕಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಹಲವಾರು ವರ್ಷಗಳಿಂದ ಕನ್ನಡ ಶಾಲಾ ಕೊಠಡಿಗಳನ್ನು ಕಟ್ಟಿ ಕೊಡಿ ಎಂದು ಗೋಗರೆದರೂ ಈ ಗಡಿಭಾಗದಲ್ಲಿರುವ ಗ್ರಾಮಕ್ಕೆ ಮಾತ್ರ ಕನ್ನಡ ಶಾಲೆಗಳ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಉರ್ದು ಶಾಲೆಗಳಿಗೆ ಕೊಠಡಿಗಳು ಮಂಜೂರಾಗಿವೆ. ಆದರೆ ಕನ್ನಡ ಶಾಲೆಯ ಮಕ್ಕಳು ಮಾತ್ರ ಶಾಲೆಯ ಮುಂಭಾಗದಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ. ಶಾಲಾ ಕೊಠಡಿಗಳ ಮಂಜೂರಾತಿ ವಿಚಾರದಲ್ಲಿ ಕನ್ನಡ ಶಾಲೆಯ ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗನಮಠ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಐದು ಶಾಲಾ ಕೊಠಡಿಗಳಿವೆ. ಆದರೆ ಏಳು ತರಗತಿಗಳಿದ್ದು ನಾಲ್ಕು ತರಗತಿಗಳ ಮಕ್ಕಳು ಶಾಲಾ ಕೊಠಡಿಗಳಲ್ಲಿ ಪಾಠ ಕಲಿಯುತ್ತಿದ್ದಾರೆ. ಮೂರು ತರಗತಿಗಳ ಮಕ್ಕಳು ಹಲವಾರು ವರ್ಷಗಳಿಂದ ಶಾಲೆಯ ಕಟ್ಟೆಯ ಮೇಲೆ ಕಲಿಯುತ್ತಿದ್ದಾರೆ.ಆದರೂ ಶಾಲೆಗೆ ಕೊಠಡಿಗಳು ಮಂಜೂರು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದರು.
ಲಿಂಗನಮಠ ಗ್ರಾಮದಲ್ಲಿ ಉರ್ದು ಶಾಲೆಗೆ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಆದರೆ ಕನ್ನಡ ಶಾಲೆಗೆ ಏಕಿಲ್ಲ ಎಂದು ಮಕ್ಕಳ ಪಾಲಕರು ಪ್ರಶ್ನೆ ಮಾಡುತ್ತಿದ್ದು ಕನ್ನಡ ಶಾಲೆಯ ಉಳಿವಿಗಾಗಿ ಜಿಲ್ಲಾಡಳಿತ ಕೂಡಲೇ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
PublicNext
22/09/2022 10:17 pm