ಬೈಲಹೊಂಗಲ: ಬೆಳಗಾವಿ ಜಿಲ್ಲೆ ಬಗ್ಗೆ ಸುಪ್ರೀಂ ಕೋರ್ಟನಲ್ಲಿ ವ್ಯಾಜ್ಯ ಇರುವುದರಿಂದ ಬೆಳಗಾವಿ ಜಿಲ್ಲೆಯನ್ನು ಅಖಂಡವಾಗಿ ಉಳಿಸಬೇಕು. ವಿಭಜನೆ ಕನ್ನಡ ನಾಡಿಗೆ ಪೆಟ್ಟು ಕೊಡಲಿದೆ. ಆಡಳಿತಾತ್ಮಕ ಒತ್ತಾಯ ಇದ್ದರೆ ಬ್ರಿಟಿಷರ್ ಕಾಲದಿಂದಲೂ ಉಪವಿಭಾಗ ಆಡಳಿತ ಕೇಂದ್ರವಾಗಿರುವ ಬೈಲಹೊಂಗಲ ಜಿಲ್ಲೆ ಮಾಡಬೇಕೆಂದು ಒಕ್ಕೂರಲಿನಿಂದ ಒತ್ತಾಯಿಸಿ ತಹಶೀಲ್ದಾರ ಹನುಮಂತ ಶಿರಹಟ್ಟಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಮೂರುಸಾವಿರಮಠದಲ್ಲಿ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ, ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ಶಾಸಕ ಮಹಾಂತೇಶ ಕೌಜಲಗಿ, ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳಣ್ಣವರ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಸಿ.ಆರ್.ಪಾಟೀಲ, ಉದ್ಯಮಿ ವಿಜಯ ಮೆಟಗುಡ್ಡ, ವಿಪಕ್ಷ ನಾಯಕರುಗಳ ಹಾಗೂ ನಾಡಿನ ಮುಖಂಡರುಗಳ ನೇತೃತ್ವದಲ್ಲಿ
ಈ ನಿರ್ಧಾರ ಕೈಕೊಳ್ಳಲಾಯಿತು.
ಬೆಳಗಾವಿ ಜಿಲ್ಲೆಯನ್ನು ಮೂರು ತುಂಡಾಗಿಸುವುದು ಕನ್ನಡಿಗರ ಹಿತರಕ್ಷಣೆಯಿಂದ ಒಳ್ಳೆಯದಲ್ಲ. ಈ ವಿಚಾರವನ್ನು ಕಡೆಗಣಿಸಿ ಜಿಲ್ಲೆ ವಿಭಜನೆಗೆ ನಿಂತರೆ ಬೈಲಹೊಂಗಲ ಎಲ್ಲ ದೃಷ್ಟಿಯಿಂದಲೂ ಜಿಲ್ಲಾ ಕೇಂದ್ರವಾಗಲು ಯೋಗ್ಯವಾಗಿದೆ. ಐತಿಹಾಸಿಕ ಆಡಳಿತದ ಹಿನ್ನೆಲೆ ಹೊಂದಿದೆ. ವೀರತನಕ್ಕೂ, ಸ್ವಾತಂತ್ರ್ಯ ಜಾಗೃತಿಗೆ ಮುನ್ನುಡಿ ಬರೆದ ನಾಡಾಗಿದೆ. ಮುಖ್ಯಮಂತ್ರಿಗಳು ಬೈಲಹೊಂಗಲವನ್ನು ಜಿಲ್ಲಾ ಕೇಂದ್ರ ಮಾಡಲು ಹಿಂಜರಿಯಬಾರದೆಂದು ಸಭೆಯಲ್ಲಿ ಮುಖಂಡರು ಒತ್ತಾಯಿಸಿದರು.
ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಸರಕಾರ ಬಹಳ ಯೋಚನೆ ಮಾಡಿ ನಿರ್ಧಾರ ಮಾಡಬೇಕು. ಈ ನಾಡಿನ ಸಮಸ್ತ ಜನರು ಪ್ರಾಣ ಒತ್ತೆ ಇಟ್ಟು ಹೋರಾಟ ನಡೆಸಲಿದ್ದಾರೆ. ಅನ್ಯಾಯವನ್ನು ಈ ನಾಡು ಎಂದೂ ಸಹಿಸುವುದಿಲ್ಲ ಎಂದು ತಿಳಿಸಿದರು.
ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಮುಖಡರಾದ ಸಿ.ಕೆ.ಮೆಕ್ಕೇದ, ಈಶ್ವರ ಹೋಟಿ, ಮಹಾಂತೇಶ ತುರಮರಿ, ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಮಹೇಶ ಬೆಲ್ಲದ, ಎಫ್.ಎಸ್.ಸಿದ್ಧನಗೌಡರ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಪುರಸಭೆ ಉಪಾಧ್ಯಕ್ಷ ಬುಡ್ಡೇಸಾಬ ಶಿರಸಂಗಿ, ಬಸವರಾಜ ಜನ್ಮಟ್ಟಿ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಉಪಾಧ್ಯಕ್ಷ ಎ.ಎಂ.ಸಿದ್ರಾಮನಿ, ಬಿ.ಎಂ. ಚಿಕ್ಕನಗೌಡರ, ಗುರು ಮೆಟಗುಡ್ಡ, ಪ್ರಮೋದಕುಮಾರ ವಕ್ಕುಂದಮಠ, ಸುಭಾಷ ಬಾಗೇವಾಡಿ, ಎಸ್.ವಿ.ಸಿದ್ಧಮನಿ, ಅರ್ಜುನ ಕಲಕುಟಕರ ಅನೇಕ ಮುಖಂಡರು, ಹಿರಿಯರು, ಸಾರ್ವಜನಿಕರು ಇದ್ದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಹದಿನೈದು ದಿನಗಳ ಹಿಂದೆ ರಾಮದುರ್ಗ ಶಾಸಕ ಅಶೋಕ ಪಟ್ಟಣ ಮತ್ತು ನಾನು ಸೇರಿ ಸಿಎಂ ಅವರನ್ನು ಭೇಟಿ ಮಾಡಿದ್ದೇವು. ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾವ ಇಲ್ಲ. ಒಂದು ವೇಳೆ ವಿಭಜನೆ ಮಾಡುವುದಾದರೆ ಎಲ್ಲರ ಒಪ್ಪಿಗೆ ಪಡೆದೆ ನಿರ್ಧರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆಂದು ಶಾಸಕರು ಸಭೆಗೆ ತಿಳಿಸಿದರು.
Kshetra Samachara
02/10/2024 11:41 am