ಅಥಣಿ : ತಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ರೋಗಿಗಳು ಆತಂಕದಲ್ಲೇ ಆಸ್ಪತ್ರೆಗೆ ಹೋಗುವಂತಾಗಿದೆ. ಆಸ್ಪತ್ರೆ ಮುಂಭಾಗ ನೋಡುತ್ತಿದ್ದಂತೆ ರೋಗಿಗಳ ರಕ್ತದೊತ್ತಡ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಂಗಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಶೀಥಿಲಾವಸ್ಥೆ ತಾಳಿದ್ದು, ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಭಯದಲ್ಲೇ ಕಟ್ಟಡದ ಒಳಹೋಗುವ ದುಸ್ಥಿತಿ ಉಂಟಾಗಿದೆ. ಆರೋಗ್ಯ ಸಚಿವ ಡಾ. ಸುಧಾಕರ್ ಅವರು ತಮ್ಮ ಇಲಾಖೆಯ ಕಟ್ಟಡಗಳ ಗುಣಮಟ್ಟದ ಪರಿಶೀಲನೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಆಸ್ಪತ್ರೆಯ ಮುಂಭಾಗ ಯಾವ ಕ್ಷಣದಲ್ಲಾದರೂ ಕುಸಿದು ಬೀಳಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆ ವೈದ್ಯರು ಈ ಕಟ್ಟಡದ ಮುಂಭಾಗದಲ್ಲಿ ಇಲ್ಲಿ ಯಾರೂ ನಿಲ್ಲಬೇಡಿ ಅಪಾಯ ಸಂಭವಿಸಬಹುದು ಎಂದು ಫಲಕವನ್ನು ಹಾಕಿದ್ದಾರೆ. ಕಳೆದ 2019-20 ರಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಕಟ್ಟಡ ಸಂಪೂರ್ಣ ಜಲಾವೃತವಾದ ಹಿನ್ನೆಲೆ ಸದ್ಯ ಆಸ್ಪತ್ರೆ ಶೀಥಿಲಾವಸ್ಥೆ ತಾಳಿದೆ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಕ್ಷಣದಲ್ಲಾದರೂ ಕಟ್ಟಡ ಕುಸಿದರೆ ಯಾರು ಹೊಣೆ, ಹೊಸ ಕಟ್ಟಡ ನಿರ್ಮಾಣವಾಗುವರಿಗೆ ತಾತ್ಕಾಲಿಕವಾಗಿ ಚಿಕಿತ್ಸೆಯನ್ನು ಬೇರೆ ಕಡೆ ನೀಡಬೇಕೆಂದು ತಂಗಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಂತೋಷ ಬಡಕಂಬಿ, ಪಬ್ಲಿಕ್ ನೆಕ್ಟ್ಸ್ ಅಥಣಿ
PublicNext
06/10/2022 02:43 pm