ಬೆಳಗಾವಿ: ಎರಡುವರೆ ದಶಕದ ಹಿಂದೆ ಹೃದ್ರೋಗ ಎಂದು ಕೆಲವೇ ಕೆಲವು ಜನ ಬರುತ್ತಿದ್ದರು. ಆದರೆ, ಇಂದು ನೂರಾರು ಸಂಖ್ಯೆಯಲ್ಲಿ ತಪಾಸಣೆ ಮತ್ತು ಚಿಕಿತ್ಸೆಗಾಗಿ ಪ್ರತಿದಿನ ಆಸ್ಪತ್ರೆಗೆ ಬರುವುದು ಸಾಮಾನ್ಯವಾಗಿದೆ. ಹೃದ್ರೋಗ ತ್ವರಿತಗತಿಯಲ್ಲಿ ಹೆಚ್ಚಳವಾಗುತ್ತಿದ್ದು, 2030ಕ್ಕೆ ಇದು ವಿಶ್ವದಾದ್ಯಂತ ನಂ. ವನ್ ಕೊಲೆಗಾರ ರೋಗವಾಗಿ ಮಾರ್ಪಡಲಿದೆ.
ಭಾರತದಲ್ಲಿ ಶೇ. 30ರಷ್ಟು ಸಾವು ಕೇವಲ ಹೃದ್ರೋಗದಿಂದಲೇ ಸಂಭವಿಸಲಿವೆ ಎಂದು ಸಮೀಕ್ಷೆ ಕಂಡುಕೊಂಡಿದೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ.ಸುರೇಶ ಪಟ್ಟೇದ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಹೃದಯವನ್ನು ಹೃದಯಕ್ಕಾಗಿ ಬಳಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಮುನ್ನಡೆದು, ಆರಂಭಿಕ ಹಂತದಲ್ಲಿ ಹೃದ್ರೋಗವನ್ನು ತಡೆಗಟ್ಟಿ ಸಮಾಜದಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಹೃದಯ ದಿನದ ಮಹತ್ವವಾಗಿದೆ.
ಮಾನಸಿಕ, ನೈತಿಕ, ಭಾವನಾತ್ಮಕವಾಗಿ ನಾವು ಜನರೊಂದಿಗೆ ಬೆರೆಯುವುದರೊಂದಿಗೆ ನಾವೆಲ್ಲರೂ ನಮ್ಮ ಹೃದಯವನ್ನು ಬಳಸಬೇಕು. ಸಲಹೆ, ಕಾಳಜಿ, ಚಿಕಿತ್ಸೆಯು ಪ್ರತಿ ಹೃದಯವನ್ನು ಗುಣಪಡಿಸುತ್ತದೆ. ಹೃದಯವನ್ನು ನೋಡಿಕೊಳ್ಳುವುದು ಒಂದು ದಿನದ ಕೆಲಸವಲ್ಲ, ಅದು ಪ್ರತಿದಿನವೂ ಆಗಬೇಕು. ಈ ಕಾರ್ಯದಲ್ಲಿ ಕೆಎಲ್ಇ 30 ವರ್ಷಗಳ ಕಾಲ ತೊಡಗಿಸಿಕೊಂಡಿದೆ.
ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ. ರಿಚರ್ಡ್ ಸಾಲ್ಡಾನಾ ಮಾತನಾಡಿ, ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಜಡ ಜೀವನಶೈಲಿ ಮತ್ತು ಕೆಟ್ಟ ತಂಬಾಕು ಉತ್ಪನ್ನಗಳ ಅತಿರೇಕದ ಸೇವನೆಯಿಂದಾಗಿ ಹೃದ್ರೋಗ ಹೆಚ್ಚಾಗಲು ಕಾರಣ. ಕೊನೆಯ ಹಂತದ ಹೃದ್ರೋಗವು ಜೀವನದ ಅಂತ್ಯವಲ್ಲ.
ಹೃದಯ ಕಸಿಯ ಕೊಡುಗೆಯನ್ನು ನೀಡಿದ ವೈದ್ಯ ವಿಜ್ಞಾನವು ಈ ರೋಗಿಗಳಿಗೆ ಚಿಕಿತ್ಸೆಯ ವರದಾನ ನೀಡಿದೆ. ಡಾ. ಪ್ರಭಾಕರ ಕೋರೆಯವರ ಆಸ್ಪತ್ರೆ ಹೃದಯ ಕಸಿ ಮಾಡಲು ಅತ್ಯಾಧುನಿಕ ಉನ್ನತ ದರ್ಜೆಯ ವೈದ್ಯಕೀಯ ಮೂಲಸೌಕರ್ಯವನ್ನು ಕಲ್ಪಿಸಿಕೊಟ್ಟಿದೆ ಎಂದು ತಿಳಿಸಿದರು.
PublicNext
30/09/2022 11:54 am