ಬೆಳಗಾವಿ: ಸದಾ ಸುದ್ದಿಯಲ್ಲಿರುವ ಬೆಳಗಾವಿಯ ಉಪ ನೋಂದಣಿ ಕಚೇರಿ ಮತ್ತೆ ಸುದ್ದಿಯಾಗಿದೆ. ಒಂದು ಸಹಿ ಮಾಡಲು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷ ವಯಸ್ಸಿನ ಅಜ್ಜಿಯನ್ನು ಕಚೇರಿಗೆ ಕರೆಸಿ ಮಾನವೀಯತೆ ಮರೆತ್ತಿದ್ದಾರೆ.
ಹೌದು. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ 80 ವರ್ಷದ ವೃದ್ಧೆಯನ್ನು ಕಚೇರಿಗೆ ಕರೆಯಿಸಿರುವ ಬೆಳಗಾವಿ ಉಪನೋಂದಣಾಧಿಕಾರಿ ಕಚೇರಿ ಅಧಿಕಾರಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವೃದ್ಧೆಯನ್ನು ಆಕೆಯ ಸಂಬಂಧಿಕರು ಬೆಡ್ ಮೇಲೆಯೇ ಉಪನೋಂದಣಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ.
ಬೆಳಗಾವಿಯ ವೃದ್ಧೆ ಮಹಾದೇವಿ ಅಗಸಿಮನಿ ಅವರು ಆಸ್ತಿಹಂಚಿಕೆ, ಆಸ್ತಿಹಕ್ಕು ಪತ್ರಕ್ಕೆ ಸಹಿ ಹಾಕುವ ವಿಚಾರಕ್ಕೆ ನೋಂದಣಿ ಮಾಡಿಸಬೇಕಿತ್ತು. ಅಜ್ಜಿ ಮಹಾದೇವಿ ಅಗಸಿಮನಿ ಹೆಬ್ಬಟ್ಟು ಒತ್ತಿ ಸಹಿ ಮಾಡಬೇಕಿತ್ತು. ಆದ್ರೆ ಅಜ್ಜಿ ಐಸಿಯುನಲ್ಲಿದ್ದ ಕಾರಣ ಉಪನೋಂದಣಿ ಅಧಿಕಾರಿಗೆ ಆಸ್ಪತ್ರೆಗೆ ಬರಲು ಮನವಿ ಮಾಡಿದ್ದಾರೆ. ಆದ್ರೆ ಆಸ್ಪತ್ರೆಗೆ ಬಂದು ಅಜ್ಜಿಯ ಹೆಬ್ಬೆಟ್ಟು ಒತ್ತಿಕೊಳ್ಳಲು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ.
ಆಸ್ಪತ್ರೆಗೆ ಆಗಮಿಸಿ ಸಹಿ ಮಾಡಿಸಿಕೊಳ್ಳಲು ಉಪನೋಂದಣಾಧಿಕಾರಿ ಪದ್ಮನಾಭ್ ಗುಡಿ ನಿರಾಕರಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಳಿಕ ಹಣ ನೀಡಲು ಒಪ್ಪದ ಅಜ್ಜಿಯ ಕುಟುಂಬಸ್ಥರು ಐಸಿಯುನಿಂದ ಅಜ್ಜಿಯನ್ನು ಕಚೇರಿಗೆ ಕರೆತಂದಿದ್ದಾರೆ. ಸದ್ಯ ಆಸ್ಪತ್ರೆಯ ಬೆಡ್ ಮೇಲೆ ಕಚೇರಿಗೆ ಬಂದು ಅಜ್ಜಿ ಸಹಿ ಮಾಡುವ ವಿಡಿಯೋ ವೈರಲ್ ಆಗಿದ್ದು, ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
PublicNext
01/10/2022 05:27 pm