ಅಥಣಿ: ಮಳೆ ಮಾಪನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ವಿಮೆಯ ಹಣ ಮಂಜೂರು ಆಗದೆ ಇರುವುದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ದ್ರಾಕ್ಷಿ ಬೆಳೆಗಾರರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಹಾಗೂ ಐಗಳಿ ಗ್ರಾಮದಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಗಾರರಿದ್ದು, ಕಳೆದ ವರ್ಷ ಹಂಗಾಮಿನಲ್ಲಿ ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಗಾರರಿಗೆ ತೀವ್ರ ನಷ್ಟ ಸಂಭವಿಸಿದೆ. ಈ ನಷ್ಟ ಸರಿಹೊಂದಿಸಲು ಕಳೆದ ವರ್ಷ ಫಸಲು ಭೀಮಾ ಯೋಜನೆ ಅಡಿಯಲ್ಲಿ ಪ್ರತಿ ಹೆಕ್ಟೇರಿಗೆ ಇನ್ಶೂರೆನ್ಸ್ ತುಂಬಿದ್ದು ಆದರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ಐಗಳಿ ತೆಲಸಂಗ ಗ್ರಾಮದಲ್ಲಿ ಮಳೆ ಮಾಪನ ಯಂತ್ರಗಳು ಕೆಟ್ಟು ಹೋಗಿದ್ದರಿಂದ ರೈತರಿಗೆ ವಿಮೆ ಹಣ ಬಂದಿಲ್ಲ. ಇದ್ರಿಂದ ದ್ರಾಕ್ಷಿ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಮಳೆ ಮಾಪನ ಯಂತ್ರಗಳ ಆಧಾರಗಳ ಮೇಲೆ ವಿಮೆ ಹಣ ಬರುತ್ತದೆ, ಈ ಪ್ರದೇಶದಲ್ಲಿ ಮಳೆ ಆಗಿಲ್ಲ ಎಂಬ ವರದಿಯಿಂದ ದ್ರಾಕ್ಷಿ ಬೆಳೆಗಾರರಿಗೆ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ, ಆ ನಷ್ಟವನ್ನು ಸರಿ ಹೊಂದಿಸಿ ಕೊಡಬೇಕೆಂದು ದ್ರಾಕ್ಷಿ ಬೆಳೆಗಾರರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಮಾಧ್ಯಮಗಳ ಜೊತೆ ಮಾಜಿ ಶಾಸಕ ಹಾಗೂ ದ್ರಾಕ್ಷಿ ಬೆಳೆಗಾರ ಶಹಜಾನ್ ಡೊಂಗರಗಾಂವ್ ಹಾಗೂ ದ್ರಾಕ್ಷಿ ಬೆಳೆಗಾರ ಚಂದ್ರಶೇಖರ ನೇಮಗೌಡ ಮಾತನಾಡಿ, ಐಗಳಿ ಮತ್ತು ತೆಲಸಂಗ್ ಗ್ರಾಮ ಪಂಚಾಯಿತಿಗಳ ಮೇಲಿರುವ ಮಳೆ ಮಾಪನ ಯಂತ್ರಗಳು ಕೆಟ್ಟು ಹೋದ ಪರಿಣಾಮವಾಗಿ ನಮಗೆ ವಿಮೆ ಹಣ ಜಾರಿಯಾಗಿಲ್ಲ, ಯಂತ್ರಗಳು ಮಳೆ ಮಾಪನ ಕೇಂದ್ರಕ್ಕೆ ಸಂದೇಶ ರವಾನೆ ಮಾಡುತ್ತವೆ, ಯಂತ್ರಗಳು ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಾಸ್ತವವಾಗಿ ಅಥಣಿ ತಾಲೂಕಿನಲ್ಲಿ ಈ ಎರಡು ಗ್ರಾಮಗಳಲ್ಲಿ ಹೆಚ್ಚಾಗಿ ಅಕಾಲಿಕ ಮಳೆ ಸಂಭವಿಸಿ ಲಕ್ಷಾಂತರ ರೂಪಾಯಿ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಈ ಎರಡು ಗ್ರಾಮಗಳನ್ನು ಹೊರತುಪಡಿಸಿ ತಾಲೂಕಿನಾದ್ಯಂತ ರೈತರಿಗೆ ವಿಮೆ ಹಣ ಬಂದಿದೆ. ಆದರೆ ನಷ್ಟ ಸಂಭವಿಸಿದ ರೈತರಿಗೆ ಸೂಕ್ತ ಹಣ ಬಂದಿಲ್ಲವೆಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
-ಸಂತೋಷ ಬಡಕಂಬಿ, ಪಬ್ಲಿಕ್ ನೆಕ್ಸ್ಟ್, ಅಥಣಿ
PublicNext
27/09/2022 05:25 pm