ಯಲಹಂಕ: ಬೆಂಗಳೂರು ಭಾರಿ ಮಳೆನ ತಡೆಯಲು ಸಾಧ್ಯವೇ ? ನಿನ್ನೆ ರಾತ್ರಿ ಯಲಹಂಕ ಸುತ್ತಾಮುತ್ತಾ ಸುರಿದ ಭಾರಿ ಮಳೆಗೆ ರಾಜಕಾಲುವೆ ತುಂಬಿ ನೀರು ಹರಿದು ಕೋಗಿಲು ಸರ್ಕಲ್ ಬಳಿಯ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಗೆ ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮಳೆ ನೀರು ಕಡಿಮೆಯಾದಂತೆ ಈಗ ಆತಂಕವೂ ದೂರ ಆಗಿದೆ.
ಕಳೆದ 2021ರ ನವೆಂಬರ್ ತಿಂಗಳ ಭಾರಿ ಮಳೆಗೆ ಯಲಹಂಕ ಕೆರೆ ಕೋಡಿಬಿದ್ದ ಪರಿಣಾಮ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಮೂರ್ನಾಲ್ಕು ದಿನ ಜಲದಿಗ್ಭಂಧನಕ್ಕೆ ಒಳಗಾಗಿತ್ತು. ಮೂರ್ನಾಲ್ಕು ಅಡಿ ನೀರು ನುಗ್ಗಿ ಒಳಗಿನವರು ಹೊರಬರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯ ಶಾಸಕ ಎಸ್.ಆರ್. ವಿಶ್ವನಾಥ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಕೇಂದ್ರೀಯ ವಿಹಾರಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಆದೇಶಿಸಿದ್ದರು. ಆಗಿನಿಂದ ರಾಜಕಾಲುವೆ ಕಾಮಗಾರಿ ಈಗಲೂ ಸಹ ಸಾಗುತ್ತಿದೆ.
ಅದರೆ ರಾತ್ರಿ ಸುರಿದ ಭಾರಿ ಮಳೆಗೆ ಕೋಗಿಲು ಕ್ರಾಸ್ ಬಳಿಯ ರಾಜಕಾಲುವೆ ನೀರು ಮುಂದಕ್ಕೆ ಹರಿಯದೆ ಹಿಮ್ಮುಖವಾಗಿ ಬಂದ ಪರಿಣಾಮ, ಕೇಂದ್ರೀಯ ವಿಹಾರದ ಪಾರ್ಕಿಂಗ್ ಪ್ರದೇಶದಲ್ಲಿ ಮೂರ್ನಾಲ್ಕು ಅಡಿ ನೀರು ನಿಂತು ಸಮಸ್ಯೆ ಆಗಿತ್ತು. ಸಮಸ್ಯೆ ತಿಳಿದು ಮಧ್ಯರಾತ್ರಿ 2 ಗಂಟೆಗೆ ಶಾಸಕ ವಿಶ್ವನಾಥ್ & ಬಿಬಿಎಂಪಿ ಸಿಬ್ಬಂದಿ ಭೇಟಿ ನೀಡಿತ್ತು.ಇದೀಗ ಬೆಳಗ್ಗೆ 6 ಗಂಟೆಗೆ ಮತ್ತೆ ಸ್ಥಳ ಪರಿಶೀಲನೆ ನಡೆಸಿ ತೆರಳಿದ್ದಾರೆ. ಸದ್ಯ ಕೇಂದ್ರೀಯ ವಿಹಾರದ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ನಂತರ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಅಂತಾರೆ ಅಪಾರ್ಟ್ಮೆಂಟ್ ನವರು.
ಬೆಂಗಳೂರಿನ ರಾಜಕಾಲುವೆಗಳ ಅಗಲೀಕರಣ ಆಗಬೇಕು. ಮಳೆ ನೀರು ರಸ್ತೆಯಲ್ಲಿ ಹರಿಯದೆ ಕಾಲುವೆಯಲ್ಲಿ ಹರಿಯಬೇಕು. ಜೊತೆಗೆ ಬಿಬಿಎಂಪಿ ಭಾರಿ ಮಳೆಯನ್ನು ಎದುರಿಸಲು ಸಜ್ಜಾಗಬೇಕಿದೆ..
Kshetra Samachara
18/05/2022 09:30 pm