ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ಆಡಳಿತ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣದ ನೆಪದಲ್ಲಿ ಸುಮಾರು 180 ಕೋಟಿ ರೂ.ಗಳನ್ನು ಕಸದ ಗುಂಡಿಗೆ ಸುರಿಯಲು ಮುಂದಾಗಿದೆ!
ವಾರ್ಡ್ ಗಳಲ್ಲಿ ಕಸ ಸಂಗ್ರಹಿಸಿಕೊಂಡು ಹೊರವಲಯದ ಸಂಸ್ಕರಣಾ ಘಟಕಗಳಿಗೆ ಸಾಗಿಸುವ ಬದಲು ನಗರದ ಮೂರು ಪ್ರಮುಖ ಜಾಗಗಳಲ್ಲಿ ಕಸ ಸಂಗ್ರಹಿಸಿಕೊಂಡು ನಂತರ ಸಾಗಣೆ ಮಾಡಲು ಮುಂದಾಗಿದೆ. ಇದಕ್ಕಾಗಿ ಕೋಟ್ಯಂತರ ರೂ. ಬೆಲೆಬಾಳುವ ಮೂರು ಪ್ರಮುಖ ಜಾಗಗಳಲ್ಲಿ ಟ್ರಾನ್ಸ್ ಫರ್ ಸ್ಟೇಷನ್ ಹೆಸರಿನ ಕಸದ ಸಂಗ್ರಹ ತಾಣ ನಿರ್ಮಿಸಲು ಸದ್ದಿಲ್ಲದೆ ಟೆಂಡರ್ ಪ್ರಕ್ರಿಯೆ ಮುಗಿಸಿ ಬಿಟ್ಟಿದೆ.
ಅಂದರೆ, ಸದ್ಯ ಇರುವ ವ್ಯವಸ್ಥೆಯಲ್ಲಿ ಮನೆಗಳಿಂದ ಕಸ ಸಂಗ್ರಹಿಸುವ ವಾಹನಗಳು ಕಸವನ್ನು ಕಾಂಪ್ಯಾಕ್ಟರ್ ಗಳಿಗೆ ಹಾಕುತ್ತವೆ. ನಂತರ ಕಾಂಪ್ಯಾಕ್ಟರ್ ಗಳು ಬೆಂಗಳೂರಿನ ಹೊರ ವಲಯದಲ್ಲಿರುವ ಕಸ ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ಯುತ್ತವೆ. ಹೀಗಾಗಿ 10 ಟನ್ ಸಾಮರ್ಥ್ಯದ ಒಂದು ಕಾಂಪ್ಯಾಕ್ಟರ್ ಗೆ ಕಸ ಸಾಗಿಸಲು ತಿಂಗಳಿಗೆ 1.86 ಲಕ್ಷ ರೂ. ಬಾಡಿಗೆ ಮಾತ್ರ ಪಾವತಿಸಬೇಕಾಗುತ್ತದೆ. ಆದರೆ, ಬಿಬಿಎಂಪಿ ಈಗ ನಿರ್ಧರಿಸಿರುವ ಹೊಸ ಕಸ ನಿರ್ವಹಣಾ ವ್ಯವಸ್ಥೆಯಲ್ಲಿ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ ಹೆಚ್ಚುವರಿ 180 ಕೋಟಿ ರೂ. ವೆಚ್ಚ ಮಾಡಲು ಸಾಕಷ್ಟು ತರಾತುರಿಯ ಕ್ರಮಕೈಗೊಳ್ಳುತ್ತಿದೆ.
ಅಷ್ಟಕ್ಕೂ ಇಂಥ ಟ್ರಾನ್ಸ್‌ಫರ್ ಸ್ಟೇಷನ್‌ಗಳು ಈಗಾಗಲೇ ಚಿಕ್ಕ ಪ್ರಮಾಣದಲ್ಲಿ ಅಸ್ತಿತ್ವದಲ್ಲಿದ್ದು, ಅವುಗಳಿಂದ ಕಸ ನಿರ್ವಹಣೆಗೆ ಹೇಳಿಕೊಳ್ಳುವ ಪ್ರಯೋಜನವೇನೂ ಆಗುತ್ತಿಲ್ಲ. ಇಂಥ ವೈಫಲ್ಯದ ನಡುವೆಯೂ ಬಿಬಿಎಂಪಿ ಆಡಳಿತ ಸರಕಾರದ ಪರೋಕ್ಷ ಬೆಂಬಲದೊಂದಿಗೆ 150 ಟನ್ ಸಾಮರ್ಥ್ಯದ ಮೂರು ಹೊಸ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣ ಮಾಡುತ್ತಿದೆ.
ಈ ಮೂಲಕ ಪಾಲಿಕೆಯ ಕೋಟ್ಯಂತರ ರೂ. ಮತ್ತು ಕೋಟ್ಯಂತರ ಮೌಲ್ಯದ ಜಾಗವನ್ನು ಖಾಸಗಿ ಸಂಸ್ಥೆಗೆ ನೀಡಲು ಕ್ರಮಕೈಗೊಂಡಿದೆ. ಪಾಲಿಕೆಯ ಹಣವನ್ನು ಅನಗತ್ಯವಾಗಿ ವೆಚ್ಚ ಮಾಡುವ ದೊಡ್ಡ ಹಗರಣ ಇದಾಗಿದ್ದು, ಇದರ ಹಿಂದೆ ಭಾರೀ ರಾಜಕೀಯ ಕೈಗಳೇ ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗುತ್ತಿವೆ.
-ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
Kshetra Samachara
28/08/2022 11:34 am