ಬೆಂಗಳೂರು: ಬಿಬಿಎಂಪಿ ವಾರ್ಡ್ ಮೀಸಲಾತಿ ವಿರೋಧಿಸಿ ಕಾಂಗ್ರೆಸ್ ಮುಖಂಡರು ಇಂದು ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧದ 4ನೇ ಮಹಡಿಯಲ್ಲಿರುವ ಕಚೇರಿಗೆ ಬಿಜೆಪಿ, ಆರ್ಎಸ್ಎಸ್ ಕಚೇರಿ ಎಂದು ಬೋರ್ಡ್ ಹಿಡಿದು ಲಗ್ಗೆ ಇಟ್ಟ ಕಾಂಗ್ರೆಸ್ ಮುಖಂಡರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ಖಾನ್, ಸಂಸದ ಡಿ.ಕೆ.ಸುರೇಶ್, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ನೂಕುನುಗ್ಗಲು ಉಂಟಾಯಿತು.
ಡಿ ಲಿಮಿಟೇಷನ್ ಕಂದಾಯ ಇಲಾಖೆ ಮಾಡಬೇಕಿತ್ತು. ಆರ್ಎಸ್ಎಸ್, ಬಿಜೆಪಿ ನಾಯಕರು ಡಿ ಲಿಮಿಟೇಷನ್ ಮಾಡಿದ್ದಾರೆ. ಮೂರುವರೆ ಸಾವಿರ ಆಕ್ಷೇಪಣೆಗಳು ಬಂದಿದ್ದವು. ಅದನ್ನು ಸರ್ಕಾರ ಕೇರ್ ಮಾಡಿಲ್ಲ. ಮೀಸಲಾತಿ ಸರಿಯಾಗಿ ಮಾಡಿಲ್ಲ. ಮನಸ್ಸಿಗೆ ಬಂದಂತೆ ಮೀಸಲಾತಿ ಮಾಡಿದ್ದಾರೆ. ನಮ್ಮ ಪಕ್ಷದ ಕಾರ್ಪೋರೇಟರ್ ನಿಲ್ಲದ ಹಾಗೆ ಮಾಡಿದ್ದಾರೆ. ಮಹಿಳೆಯರಿಗೂ ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ 100% ನೀಡಿದ್ದಾರೆ. ಒಬಿಸಿ ಮೀಸಲಾತಿಯನ್ನು ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಹೆಚ್ಚು ಹಾಕಿದ್ದಾರೆ. ಇದೊಂದು ವ್ಯವಸ್ಥಿತವಾಗಿ ಮಾಡಿರೋ ಅನ್ಯಾಯ, ಅಕ್ರಮ ಮಾಡಿದ್ದಾರೆ ಎಂದು ಕೈ ನಾಯಕರು ಆರೋಪಿಸಿದರು.
Kshetra Samachara
05/08/2022 08:40 pm