ಬೆಂಗಳೂರು: ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳ ಟೂಲ್ ಕಿಟ್ ಪೂರೈಕೆ ಟೆಂಡರ್ ನಲ್ಲಿ ಬೃಹತ್ ಹಗರಣ ನಡೆದಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷ ಕೌಶಲ್ಯಾಭಿವೃದ್ಧಿ ಇಲಾಖೆಯ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದೆ.
ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ, ಉಪಾಧ್ಯಕ್ಷ ಭಾಸ್ಕರ್ ರಾವ್ ನೇತೃತ್ವದ ನಿಯೋಗ ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರನ್ನು ಭೇಟಿ ಮಾಡಿ ದಾಖಲೆ ಸಮೇತ ದೂರು ನೀಡಿ ನ್ಯಾಯಾಂಗ ತನಿಖೆ ಒಳಪಡಿಸುವಂತೆ ಮನವಿ ಮಾಡಿತು.
ಕೌಶಲ್ಯಾಭಿವೃದ್ದಿ ಇಲಾಖೆ ಅಧೀನದಲ್ಲಿರುವ ರಾಜ್ಯ ಕೈಗಾರಿಕಾ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ 13 ಸಾವಿರ ವಿದ್ಯಾರ್ಥಿಗಳಿಗೆ ಪೂರೈಸಲು 22 ಕೋಟಿ ವೆಚ್ಚದಲ್ಲಿ ಟೂಲ್ ಕಿಟ್ ಖರೀದಿಸುವ ಟೆಂಡರ್ ನಲ್ಲಿ ಹಗರಣ ನಡೆದಿದೆ. ಇದರ ಹಿಂದೆ ಸಚಿವ ಅಶ್ವಥ್ ನಾರಾಯಣ್ ನೇರ ಕೈವಾಡವಿದೆ. ಅಲ್ಲದೆ ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದೆ ಎಂದು ಆರೋಪಿಸಿದೆ.
ಆಮ್ ಆದ್ಮಿಪಕ್ಷ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾಧ್ಯಮಗಳ ಜೊತೆ ಮಾತನಾಡಿ ಟೂಲ್ ಕಿಟ್ ಹಗರಣದಲ್ಲಿ ಭ್ರಷ್ಟಾಚಾರ ನಡೆದಿದೆ. ಫೋರ್ಜರಿ ದಾಖಲೆ ಸೃಷ್ಠಿಸಿ ಟೆಂಡರ್ ಪಡೆದಿರುವ ಇಂಟಲೆಕ್ಟ್ ಸಿಸ್ಟಮ್ಸ್ ಸಂಸ್ಥೆಯು ಈ ಹಿಂದೆ ರಿಜೆಕ್ಟ್ ಅದರೂ ಇದೇ ಕಂಪನಿಗೆ ಮರು ಟೆಂಡರ್ ನೀಡಿದೆ.ಅರ್ಹತೆವಿಲ್ಲದಿದ್ದರೂ ನಕಲಿ ದಾಖಲೆ ನೀಡಿ ತಾಂತ್ರಿಕ ಅನುಮೋದನೆ ಪಡೆದಿದೆ.
ಸಚಿವ ಅಶ್ವಥ್ ನಾರಾಯಣ್ ಒತ್ತಡ ಹಾಗೂ ನೇರ ಹಸ್ತಕ್ಷೇಪದಿಂದ ಬೋಗಸ್ ಕಂಪನಿಗೆ 22 ಕೋಟಿ ಮೊತ್ತದ ಟೆಂಡರ್ ನೀಡಿದೆ. ಇದು ರಾಜ್ಯ ಬಿಜೆಪಿ ಸರ್ಕಾರದ ಮತ್ತೊಂದು 40% ಹಗರಣ ಎಂದು ಆರೋಪಿಸಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ ಹಾಗೂ ಪಕ್ಷದ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ ಮೊದಲ ಬಾರಿಗೆ ಟೆಂಡರ್ ನಲ್ಲಿ ಭಾಗಿಯಾಗಿದ್ದ ಇಂಟಲೆಕ್ಟ್ ಸಿಸ್ಟಮ್ಸ್ ಕಂಪನಿಗೆ ತಾಂತ್ರಿಕ ಅರ್ಹತೆ ಇಲ್ಲದ ಕಾರಣಕ್ಕಾಗಿ ಮೊದಲ ಬಾರಿ ಈ ಕಂಪನಿಗೆ ಟೆಂಡರ್ ರಿಜೆಕ್ಟ್ ಮಾಡಲಾಗಿತ್ತು. ಬಳಿಕ ಇದೇ ಕಂಪನಿಗೆ ಟೆಂಡರ್ ನೀಡುವ ಸಲುವಾಗಿ ಇಡೀ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಗಿದೆ. ಮರು ಟೆಂಡರ್ ನಲ್ಲಿ ರಿಜೆಕ್ಟ್ ಆದ ಕಂಪನಿ ಬೋಗಸ್ ದಾಖಲೆ ಸೃಷ್ಟಿಸಿಕೊಟ್ಟು ಅದೇ ಕಂಪನಿಗೆ ಟೆಂಡರ್ ನೀಡಲಾಗಿದೆ.
ಕಂಪನಿ ಈ ಹಿಂದೆ 22 ಕೋಟಿ ಹಾಗೂ 11 ಕೋಟಿ ಮೊತ್ತದ ಸಾಮಾಗ್ರಿಗಳನ್ನ ಪೂರೈಸಿರೋದಾಗಿ ನಕಲಿ ಬಿಲ್ ಸೃಷ್ಟಿಸಲಾಗಿದೆ. ನಕಲಿ ಜಿಎಸ್ ಟಿ ಬಿಲ್ ಗಳನ್ನು ಸೃಷ್ಟಿಸಿರುವ ಬಗ್ಗೆ ಜಿಎಸ್ ಟಿ ಪ್ರಾಧಿಕಾರವೇ ಈ ಬಿಲ್ ಗಳು ನಕಲಿ ಎಂದು ಹೇಳಿಕೆ ನೀಡಿದೆ. ಅವ್ಯವಹಾರದ ಹಿಂದೆ ಸಚಿವ ಅಶ್ವಥ್ ನಾರಾಯಣ್ ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆಪಾದಿಸಿದ್ದಾರೆ.
PublicNext
02/08/2022 09:18 pm