ದೊಡ್ಡಬಳ್ಳಾಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ವತಿಯಿಂದ ರಾಜ್ಯ ಮಟ್ಟದ ಸಮರ್ಥ್ ಶಿಬಿರವನ್ನು ಜುಲೈ 16ರಿಂದ 20ರವರೆಗೆ ದೊಡ್ಡಬಳ್ಳಾಪುರ ತಾಲೂಕಿನ ಬೆಸೆಂಟ್ ಪಾರ್ಕ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದರು.
ಕಾರ್ಯಕ್ರಮ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಅಧ್ಯಕ್ಷ ರಾಮಲಿಂಗರೆಡ್ಡಿ ಬೆಂಗಳೂರು ಹಾಗೂ ಮೈಸೂರು ವಿಭಾಗದ 700 ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಲಿದ್ದು, ಐದು ದಿನಗಳ ಶಿಬಿರಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜುಲೈ16ರಂದು ಬೆಳಿಗ್ಗೆ 8ಕ್ಕೆ ಸೇವಾದಳ ಧ್ವಜಾರೋಹಣ ನೆರವೇರಿಸಲಾಗುವುದು. ಬೆಳಿಗ್ಗೆ 10ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಿಬಿರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಬಲರಾಮ್ ಸಿಂಗ್ ಬದಾರಿಯಾ, ಬಿ.ಕೆ.ಹರಿಪ್ರಸಾದ್, ಎಂ.ವೀರಪ್ಪ ಮೊಯಿಲಿ, ಸಲೀಂ ಅಹ್ಮದ್, ಎಂ.ಬಿ.ಪಾಟೀಲ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
2ನೇ ಹಂತದ ಶಿಬಿರ ಜುಲೈ 22ರಿಂದ 26ರವರೆಗೆ ಸಮರ್ಥ ಶಿಬರ ನಡೆಯಲಿದೆ. 2ನೇ ಹಂತದ ಶಿಬಿರದಲ್ಲಿ ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಶಿಬಿರ ಉದ್ಘಾಟಿಸಲಿದ್ದಾರೆ. ಎರಡೂ ಹಂತದ ಶಿಬಿರಗಳಲ್ಲಿ ವಿವಿಧ ಕ್ಷೇತ್ರದ ಪರಿಣಿತರು ಹಾಗೂ ಕಾಂಗ್ರೆಸ್ ಹಿರಿಯ ನಾಯಕರು ಉಪನ್ಯಾಸ ನೀಡಲಿದ್ದಾರೆ. ರಾಜಕೀಯ ರಹಿತವಾದ ಸಂಘಟನೆ ಕಾಂಗ್ರೆಸ್ ಸೇವಾದಳ. ಕಾರ್ಯಕ್ರಮ ಯೋಜನೆ, ಶಿಸ್ತುಬದ್ಧ ನಿರ್ವಹಣೆ, ರೋಟರಿ ಹಾಗೂ ಲಯನ್ಸ್ ಕ್ಲಬ್ ರೀತಿ ಸಾಮಾಜಿಕ ಸೇವೆಗಳಲ್ಲಿ ನಿಸ್ವಾರ್ಥದಿಂದ ತೊಡಗಿಸಿಕೊಳ್ಳುತ್ತದೆ. ಸೇವಾದಳದ ಚಟುವಟಿಕೆ, ಸಂಘಟನೆ ಬಗ್ಗೆ ಕಾರ್ಯಕರ್ತರಲ್ಲಿ ಮತ್ತಷ್ಟು ಅರಿವು ಮೂಡಿಸುವುದು ಶಿಬಿರದ ಉದ್ದೇಶ ಎಂದರು.
PublicNext
15/07/2022 03:40 pm