ಬೆಂಗಳೂರು ( ನಾಗರಬಾವಿ ) : ಜೂನ್ 20 ರಂದು ಬೆಂಗಳೂರು ಪ್ರವಾಸ ಕೈಗೊಳ್ಳಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೇಸ್ ಕ್ಯಾಂಪಸ್ ನಲ್ಲಿ 150 ಮೇಲ್ದರ್ಜೆಗೇರಿಸಲ್ಪಟ್ಟ ಐಟಿಐಗಳ ಲೋಕಾರ್ಪಣೆ ಮಾಡಲಿದ್ದಾರೆ. ಐಟಿಐ ಲೋಕಾರ್ಪಣೆ ಶಿಲಾ ಫಲಕದಲ್ಲಿ ತಮ್ಮ ಹೆಸರಿಲ್ಲದಿರುವುದಕ್ಕೆ ಸಚಿವ ಮತ್ತು ಗೋವಿಂದರಾಜನಗರ ಶಾಸಕ ವಿ. ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಸ್ಥಳೀಯ ಶಾಸಕ ವಿ. ಸೋಮಣ್ಣ ಅವರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೇಸ್ ಕ್ಯಾಂಪಸ್ ಬರಲಿದೆ. ಅಧ್ಯಕ್ಷತೆ ವಹಿಸುವ ತಮ್ಮ ಹೆಸರೇ ಇಲ್ಲ ಅಂದರೆ ಹೇಗೆ? ಬೇಸ್ ಕ್ಯಾಂಪಸ್ ನಮ್ಮ ಕ್ಷೇತ್ರದಲ್ಲೇ ಬರುತ್ತದೆ. ಕೂಡಲೇ ಶಿಲಾಫಲಕ ಬದಲಾಯಿಸಿ. ಇಲ್ಲದಿದ್ದರೆ ನಾಳೆ ಬೆಳಗ್ಗೆಯೇ ಒಡೆದು ಹಾಕುತ್ತೇನೆ ಎಂದು ಸಚಿವ ವಿ. ಸೋಮಣ್ಣ ಗರಂ ಆದರು. ಬೇಸ್ ಕ್ಯಾಂಪಸ್ ನಲ್ಲಿ ಕಾರ್ಯಕ್ರಮದ ಸಿದ್ಧತೆಗೆ ತೆರಳಿದ್ದ ವೇಳೆ ಸಚಿವ ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದರು .
ಇದೆಲ್ಲಾ ರಾಜ್ಯ ಸರ್ಕಾರದ ದುಡ್ಡು, ಕೇಂದ್ರ ಸರ್ಕಾರದ್ದಲ್ಲ. ಅವರು ಹೆದರಿಸುತ್ತಾರೆ ಅಂತಾ ನೀವೆಲ್ಲಾ ಹೆದರಿಕೊಂಡು ಕುಳಿತುಕೊಳ್ಳುತ್ತೀರಾ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಜೊತೆ ವಿ. ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಎದುರಲ್ಲಿ ಸಚಿವ ವಿ.ಸೋಮಣ್ಣ ಆಕ್ಷೇಪವೆತ್ತಿದರು. ಸದ್ಯ ಶಿಲಾಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೆಸರು ಮಾತ್ರ ಉಲ್ಲೇಖವಾಗಿದೆ.
Kshetra Samachara
18/06/2022 06:15 pm