ಬೆಂಗಳೂರು : ಬೆಂಗಳೂರು ಅಭಿ ವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸು ತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಒದಗಿಸಲಾದ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿ ಇಂದು ಪರಿವೀಕ್ಷಣೆ ನಡೆಸಿತು.
ಸಮಿತಿಯ ಅಧ್ಯಕ್ಷರಾದ ವಿಶ್ವನಾಥ್ ಚಂದ್ರಶೇಖರ ಮಾಮನಿ ನೇತೃತ್ವದಲ್ಲಿ ಸದಸ್ಯರಾದ ಎಸ್.ಸುರೇಶ್ ಕುಮಾರ್, ಎಂ.ಪಿ.ಅಪ್ಪಚ್ಚುರಂಜನ್, ರಮೇಶ್ ಭೂಸನೂರು, ಅಮೃತ ಅಯ್ಯಪ್ಪ ದೇಸಾಯಿ, ಉಮಾನಾಥ್ ಕೋಟ್ಯಾನ್ ಹಾಗೂ ವೀರಭದ್ರಯ್ಯ ಸೇರಿದಂತೆ ಸಮಿತಿಯ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್, ಆಯುಕ್ತರಾದ ಎಂ.ಬಿ.ರಾಜೇಶ್ ಗೌಡ ಮತ್ತು ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡವು ಕೆಂಪೇಗೌಡ ಬಡಾವಣೆಯ ಕೊಡಿಗೇಹಳ್ಳಿ, ಕನ್ನಳ್ಳಿ, ಅರ್ಚಕರ ಬಡಾವಣೆ, ಕಡಬಗೆರೆ ಸೇರಿದಂತೆ ಮೊದಲಾದ ಬ್ಲಾಕ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿವೇಶನದಾರರಿಂದ ಅಹವಾಲು ಸ್ವೀಕರಿಸಿತು.
ನಿವೇಶನದಾರರು ಹೇಳಿಕೊಂಡ ಸಮಸ್ಯೆಗಳು ಮತ್ತು ಸಮಿತಿ ಸೂಚಿಸಿರುವ ಕೆಲವು ಅಂಶಗಳನ್ನು ಜಾರಿಗೊಳಿಸುವ ಬಗ್ಗೆ ಪ್ರಾಧಿಕಾರ ತುರ್ತು ಕ್ರಮ ಜರುಗಿಸಲಿದೆ.
ಮನೆ ಕಟ್ಟಲು ತಕ್ಷಣವೇ ವ್ಯವಸ್ಥೆಕೋವಿಡ್-19 ಸಾಂಕ್ರಾಮಿಕ ಮತ್ತು ಇನ್ನಿತರೆ ತಾಂತ್ರಿಕ ಕಾರಣಗಳಿಂದಾಗಿ ಬಡಾವಣೆಯ ಕಾಮಗಾರಿಗಳು ಕಳೆದ ಮೂರು ವರ್ಷಗಳಿಂದ ಕುಂಠಿತಗೊಂಡಿದ್ದವು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಕಾಮಗಾರಿಗಳಿಗೆ ವೇಗ ನೀಡಲಾಗಿದೆ. ನಿವೇಶನದಾರರು ಮನೆ ಕಟ್ಟಲು ಮುಂದೆ ಬಂದರೆ ತಕ್ಷಣವೇ ಅದಕ್ಕೆ ಅಗತ್ಯವಿರುವ ನೀರು, ವಿದ್ಯುತ್ ಮತ್ತು ಕಚ್ಚಾರಸ್ತೆಯ ವ್ಯವಸ್ಥೆಯನ್ನು ಕಲ್ಪಿಸಲು ಬಿಡಿಎ ಬದ್ಧವಾಗಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ ತಿಳಿಸಿದರು.
ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಸುಮಾರು 59 ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಮನೆ ನಿರ್ಮಾಣಕ್ಕೆ ಮುಂದಾಗುವ ನಿವೇಶನದಾರರಿಗೆ ವಿದ್ಯುತ್ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು.
Kshetra Samachara
02/06/2022 07:29 pm