ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವುದನ್ನು ಖಂಡಿಸಿ ಅಮಿತ್ ಶಾ ಗೋ ಬ್ಯಾಕ್, ಕನ್ನಡ ವಿರೋಧಿ ಅಮಿತ್ ಶಾ ಹಾಗೂ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿರುವ ಅಮಿತ್ ಶಾ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರೆ. ಅಷ್ಟೇ ಅಲ್ಲದೆ ಭ್ರಷ್ಟಾಚಾರದಲ್ಲಿ ಅಮಿತ್ ಶಾ ನೀವು ಎಷ್ಟು ಪಾಲು ಪಡೆಯುತ್ತೀರಾ ಎಂಬುದರ ಬಗ್ಗೆ ರಾಜ್ಯದ ಜನತೆಗೆ ತಿಳಿಸಬೇಕೆಂದು ಆಗ್ರಹಿಸಿದರು.
ಭ್ರಷ್ಟ ಬಿಜೆಪಿ ಸರಕಾರ ದೇಶದ ಇತಿಹಾಸದಲ್ಲೇ ಎಲ್ಲ ಇಲಾಖೆಯಲ್ಲೂ ದಿನನಿತ್ಯ ಲೂಟಿ ಮಾಡುತ್ತಿದೆ. ನೇಮಕಾತಿ ಹಗರಣಗಳಲ್ಲಿ ಬಿಜೆಪಿಯ ಮಂತ್ರಿಗಳು, ಪಕ್ಷದ ಮುಖಂಡರು ಭಾಗಿಯಾಗಿ ಸಮಾಜದ ಮೌಲ್ಯವನ್ನು ಹಾಳುಗೆಡುವುತ್ತಿದ್ದಾರೆ. ಶ್ರಮವಹಿಸಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ದ್ರೋಹವೆಸಗಿದ್ದಾರೆ. ಇಂತಹ ಭ್ರಷ್ಟಾಚಾರಿಗಳನ್ನು ರಾಜ್ಯದ ಜನತೆ ಕ್ಷಮಿಸುವ ಮಾತೇ ಇಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದರು.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬಿಜೆಪಿಯಂತಹ ಹಗಲು ದರೋಡೆ ಸರ್ಕಾರ ಪಕ್ಷ ಮತ್ತೊಂದಿಲ್ಲ ಎಂಬುದು ಸಾಬೀತಾಗಿದೆ. ಇಷ್ಟೆಲ್ಲಾ ಭ್ರಷ್ಟಾಚಾರ ನಡೆದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಬಿಜೆಪಿ ನಾಯಕರು ರಾಜ್ಯದ ಭ್ರಷ್ಟಾಚಾರವನ್ನು ಖಂಡಿಸುತ್ತಿಲ್ಲ. ಭ್ರಷ್ಟಾಚಾರದಲ್ಲಿ ಕೇಂದ್ರ ಸರ್ಕಾರದ ಮಂತ್ರಿಗಳು ಹಾಗೂ ಪಕ್ಷವು ಸಹ ಪಾಲು ಪಡೆದಂತೆ ಕಾಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡವನ್ನು ಕಡೆಗಣಿಸುವ ಮಾತನಾಡಿದರೆ ಅತ್ಯಂತ ಕಠಿಣ ನಿರ್ಧಾರವನ್ನು ಕನ್ನಡಿಗರು ಕೈಗೊಳ್ಳುತ್ತಾರೆ ಎಂಬುದನ್ನು ಅಮಿತ್ ಶಾ ಅರ್ಥೈಸಿಕೊಳ್ಳಬೇಕು. ಹಿಂದಿ ಭಾಷೆ ನಿಮಗೆ ಕನ್ನಡ ಭಾಷೆ ಕನ್ನಡಿಗರಿಗೆ ಕನ್ನಡ ಭಾಷೆಯ ಇತಿಹಾಸ ಎಲ್ಲಾ ಭಾಷೆಗಿಂತ ಹಳೆಯದು ಎಂಬುದನ್ನು ಅರ್ಥೈಸಿಕೊಳ್ಳಬೇಕು ಹಾಗೂ ಕನ್ನಡದ ಬಗ್ಗೆ ಹಗುರವಾಗಿ ಮಾತನಾಡುವ ಯಾರನ್ನು ಸಹಿಸಲು ಸಾಧ್ಯವಿಲ್ಲ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಪಿಎಸ್ಐ ಹಗರಣದಲ್ಲಿ ಕೋಟಿ ಕೋಟಿ ಬಾಚುತ್ತಿರುವ ಬಿಜೆಪಿಗರ ಬಗ್ಗೆ ಅಮಿತ್ ಶಾ ಅಕ್ರಮ ಏನೆಂಬುದನ್ನ ರಾಜ್ಯದ ಜನತೆಗೆ ತಿಳಿಸಬೇಕೆಂದು ಈ ಪ್ರತಿಭಟನೆ ಮೂಲಕ ಆಗ್ರಹಪಡಿಸಲಾಯಿತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಮನೋಹರ್, ಜಿ.ಜನಾರ್ಧನ್ ಎಲ್.ಜಯಸಿಂಹ, ಎ.ಆನಂದ್, ಪ್ರಕಾಶ್ ರವಿಶೇಕರ್, ಪುಟ್ಟರಾಜು ಹೇಮರಾಜು, ವೆಂಕಟೇಶ್, ಕೆ.ಟಿ ನವೀನ್, ಮಂಜುನಾಥ್, ಆನಂದ್, ಅನಿಲ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
Kshetra Samachara
03/05/2022 09:22 pm