ಬೆಂಗಳೂರು: ಈಗಾಗಲೇ ದೆಹಲಿ, ತಿರುಪತಿಯಲ್ಲಿ ಕರ್ನಾಟಕ ಭವನ ನಿರ್ಮಿಸಿರುವಂತೆ ಕಾಶ್ಮೀರದಲ್ಲೂ ಕರ್ನಾಟಕ ಭವನ ನಿರ್ಮಾಣದ ಅವಶ್ಯಕತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಜಯನಗರದಲ್ಲಿರುವ ಕಾಶ್ಮೀರ ಭವನದಲ್ಲಿ ಅನಂತಕುಮಾರ್ ಪ್ರತಿಷ್ಠಾನ ಮತ್ತು ಅದಮ್ಯ ಚೇತನದ ವತಿಯಿಂದ ಆಯೋಜಿಸಲಾಗಿದ್ದ 'ನಮ್ಮ ಕಾಶ್ಮೀರ- ನಮ್ಮ ಹೊಣೆ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ನಾಟಕ ಭವನ ಕಟ್ಟುವುದು ಒಳ್ಳೆಯ ಆಲೋಚನೆ. ಕಟ್ಟಿಸುವ ಅವಶ್ಯಕತೆ ಇದೆ. ದೆಹಲಿಯಲ್ಲಿ ಕರ್ನಾಟಕ ಭವನ ಇದೆ. ಅದೇ ರೀತಿ ಕಾಶ್ಮೀರದಲ್ಲೂ ಕನ್ನಡ ಭವನ ಆಗುತ್ತದೆ ಎಂದರು.
ಧಾರವಾಡದ ನುಗ್ಗಿಕೆರೆಯಲ್ಲಿ ಕಲ್ಲಂಗಡಿ ಹಾಳು ಮಾಡಿದ್ದು ರಾಜ್ಯಾದ್ಯಂತ ದೊಡ್ಡ ಚರ್ಚೆ ಆಯಿತು. ಆದರೆ ಹುಬ್ಬಳ್ಳಿ ಗಲಭೆಯನ್ನು ಸಕಾಲದಲ್ಲಿ ನಿಯಂತ್ರಿಸದೇ ಹೋಗಿದ್ದರೆ, ಇಡೀ ಊರು ಹೊತ್ತಿ ಉರಿಯುತ್ತಿತ್ತು. ಈ ಬಗ್ಗೆ ಹೆಚ್ಚು ಚರ್ಚೆ ಆಗಲೇ ಇಲ್ಲ. ಆ ಸಮುದಾಯದ ಎಲ್ಲರೂ ಕೆಟ್ಟವರು ಎಂದು ನಾನು ಹೇಳುವುದಿಲ್ಲ. ಕೆಲವು ಮತಾಂಧ ಶಕ್ತಿಗಳ ಕುಮ್ಮಕ್ಕ ಇದರ ಹಿಂದೆ ಇದೆ ಎಂದು ಹೇಳಿದರು.
ಮಠಗಳು ನಮ್ಮ ಧರ್ಮವನ್ನು ಗಟ್ಟಿಯಾಗಿ ಹಿಡಿಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮನುಕುಲದ ವಿರೋಧಿಗಳು ಹೆಚ್ಚಾಗಿದ್ದಾರೆ. ಪ್ರಾಣಿಗಳನ್ನಲ್ಲ, ಮನುಷ್ಯರನ್ನು ಕಡಿದು ತಿನ್ನುವ ರಾಕ್ಷಸಿ ಭಾವನೆ ಇರುವ ಸಮುದಾಯ ನಮ್ಮ ಮಧ್ಯೆ ಇರುವಾಗ, ನಾವು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು. ಬರೀ ಆಸ್ತಿ ವೃದ್ದಿಸಿಕೊಳ್ಳದೆ ಧರ್ಮವನ್ನು ಗಟ್ಟಿಯಾರಿ ಹಿಡಿಯುವ ಕೆಲಸ ಮಠಗಳಿಂದ ಆಗಬೇಕಾಗಿದೆ ಎಂದರು.
PublicNext
23/04/2022 07:50 pm