ಬೆಂಗಳೂರು: ನಾನು ತಪ್ಪು ಮಾಡಿದ್ದೇನೆಂದು ನನಗೆ ಅನ್ನಿಸುತ್ತಿಲ್ಲ. ಗೋರಿಪಾಳ್ಯದ ಘಟನೆಗೆ ಸಂಬಂಧಿಸಿದಂತೆ ನಾನು ಮೊದಲು ಒಂದು ಹೇಳಿಕೆ ನೀಡಿದ್ದೆ. ಅನಂತರ ಅದನ್ನು ಸರಿಪಡಿಸಿಕೊಂಡಿದ್ದೇನೆ. ಇದರ ಹಿನ್ನೆಲೆ ಏನು ಎನ್ನುವುದಕ್ಕೆ ಕಾಲವೇ ಉತ್ತರ ಕೊಡಲಿದೆ, ನನ್ನ ರಾಜೀನಾಮೆ ಕೇಳಲು ಕಾಂಗ್ರೆಸ್ ನವರು ಯಾರು? ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅಬ್ಬರಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವರು, ನಾನು ಅತ್ಯಂತ ವಿಶಾಲ ಮನೋಭಾವದಿಂದ ಆ ಹೇಳಿಕೆಯನ್ನು ಕೊಟ್ಟಿರುತ್ತೇನೆ. ಅದರ ಹಿನ್ನೆಲೆ ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದರು. ಕಾಂಗ್ರೆಸ್ ನವರು ದೂರು ನೀಡಿರುವ ಕುರಿತು ಮಾತನಾಡಿದ ಸಚಿವರು, ಕಾಂಗ್ರೆಸ್ ನವರು ತುರ್ತು ಪರಿಸ್ಥಿತಿಯಲ್ಲಿ ನನ್ನನ್ನು ಜೈಲಿಗೆ ಕಳಿಸಿದ್ದರು. ಅಂತದ್ರಲ್ಲಿ ಈಗ ಬರೀ ಕಂಪ್ಲೇಂಟ್ ಕೊಡೋದ್ರಲ್ಲಿ ಯಾವ ವಿಶೇಷವೂ ಇಲ್ಲ ಎಂದರು.
ಕಾಂಗ್ರೆಸ್ ನವರು ರಾಜೀನಾಮೆ ಕೇಳುತ್ತಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ, ನನ್ನ ರಾಜೀನಾಮೆ ಕೇಳಲು ಕಾಂಗ್ರೆಸ್ ನವರು ಯಾರು? ನಾನು ಏನು ಎನ್ನುವುದು ನಮ್ಮ ಪಕ್ಷಕ್ಕೆ, ಹೈಕಮಾಂಡ್ ಗೆ ತಿಳಿದಿದೆ. ನನಗೆ ಅಷ್ಟು ಸಾಕು. ಕಾಂಗ್ರೆಸ್ ನವರು ನನಗೇನೂ ಸರ್ಟಿಫಿಕೇಟ್ ಕೊಡಬೇಕಾಗಿಲ್ಲ. ನನ್ನ ಆತ್ಮ ನನಗೆ ಸರ್ಟಿಫಿಕೇಟ್ ಕೊಟ್ರೆ ಸಾಕು ಎಂದರು.
- ಪ್ರವೀಣ್ ರಾವ್, ಪೊಲಿಟಿಕಲ್ ಬ್ಯೂರೋ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
08/04/2022 07:53 pm