ಬೆಂಗಳೂರು: 'ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಎಲ್ಲ ರಾಜಕೀಯ ನಾಯಕರು ಒಂದಾಗಿಬಿಡ್ತಾರೆ. ಕೃಷ್ಣಾ ವಿಚಾರದಲ್ಲಿ ಮಹಾರಾಷ್ಟ್ರದ ಸರ್ವ ರಾಜಕೀಯ ನಾಯಕರು ಒಗ್ಗಟ್ಟಾಗ್ತಾರೆ. ಆದರೆ, ಕರ್ನಾಟಕದ ನೆಲ-ಜಲ-ಭಾಷೆ ವಿಷಯದಲ್ಲಿ ಕರ್ನಾಟಕದ ನಾಯಕರು ತಮ್ಮ ಪಕ್ಷ, ಲಾಭ-ನಷ್ಟಗಳಿಗೆ ಬಿದ್ದು ಕನ್ನಡ ಅಸ್ಮಿತೆ ವಿಚಾರದಲ್ಲಿ ನಿರಭಿಮಾನಿಗಳಾಗಿದ್ದಾರೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಟೀಕಿಸಿದೆ.
ಕೇರಳದ ಕಾಸರಗೋಡು, ಆಂಧ್ರದ ಮಡಕಶಿರಾ, ತಮಿಳುನಾಡಿನ ಕೃಷ್ಣಗಿರಿ- ಹೊಸೂರು, ಮಹಾರಾಷ್ಟದ ಕೊಲ್ಲಾಪುರ- ಸೊಲ್ಲಾಪುರ ಪ್ರದೇಶ ಕರ್ನಾಟಕಕ್ಕೆ ಸೇರಬೇಕು. ಈ ಬಗ್ಗೆ ಅಲ್ಲಿನ ಸ್ಥಳೀಯರಿಗೆ ಕರ್ನಾಟಕದ ಜೊತೆ ಸೇರಬೇಕೆಂಬ ಆಸೆ ಇದೆ. ಕನ್ನಡದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಅದೂ ಸಾಧ್ಯವಾಗಿಲ್ಲ.
ಸದ್ಯ ಎಂಇಎಸ್ - ಶಿವಸೇನೆ ಪುಂಡರು ಬೆಳಗಾವಿಯಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ, ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟು ವಿಕೃತಿ ಮೆರೆದಿದ್ದಾರೆ. ಕರ್ನಾಟಕದ ಘನತೆಗೆ ದಕ್ಕೆಯಾದರೂ ನಮ್ಮ ರಾಜಕಾರಣಿಗಳು ಒಗ್ಗಟ್ಟು ಪ್ರದರ್ಶಿಸಿಲ್ಲ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿಲ್ಲ.
ಕನ್ನಡಪರ ಸಂಘಟನೆಗಳ ಪ್ರತಿಭಟನೆ, ಹೋರಾಟ ಫಲವಾಗಿ ಎಂಇಎಸ್ -ಶಿವಸೇನೆ ಪುಂಡಾಟಿಕೆಗೆ ಬ್ರೇಕ್ ಹಾಕಿದೆ. ಕನ್ನಡ ಸ್ವಾಭಿಮಾನದ ಉಳಿವಿಗೆ ರಾಜ್ಯದ 28 ಸಂಸದರು, 11 ರಾಜ್ಯಸಭೆ ಸದಸ್ಯರು ಮುಂಬರುವ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಕನ್ನಡ ಧ್ವಜ - ಶಾಲು ಹಾಕಿಕೊಂಡು ಭಾಗಿಯಾಗಬೇಕು. ಅದಕ್ಕಾಗಿ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯದ ಎಲ್ಲ ಸಂಸದರಿಗೆ ಮನವಿ ಸಲ್ಲಿಸಿದೆ. ಆ ಮೂಲಕ ಎಂಇಎಸ್- ಶಿವಸೇನೆಯ ಪುಂಡಾಟಿಕೆಗೆ ಬ್ರೇಕ್ ಹಾಕಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆ ಒತ್ತಾಯಿಸಿದೆ.
PublicNext
30/01/2022 11:11 pm