ಬೆಂಗಳೂರು: ಅಕಾಲಿಕ ಮಳೆಯಿಂದ ಮನೆ ಬಿದ್ದ ಕುಟುಂಬಗಳಿಗೆ ಸೇರಿದಂತೆ ಮನೆಗೆ ನೀರು ನುಗ್ಗಿ ಹಾನಿಯಾದ ಕುಟುಂಬಗಳಿಗೂ ತಕ್ಷಣ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಳೆಯಿಂದ ಹಾನಿಗೊಳಗಾದ ಬಗ್ಗೆ ಸಮೀಕ್ಷೆ ನಡೆಸಿ 900 ಕೋಟಿ ಎಸ್ಟಿಮೇಷನ್ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. NDRF ಹಣವನ್ನು 3ಪಟ್ಟು ಹೆಚ್ಚಿಸುವಂತೆ ಸಲಹೆ ನೀಡಲಾಗಿದೆ. ಮುಖ್ಯಮಂತ್ರಿಗಳೂ ಪರಿಹಾರ ವಿಚಾರವಾಗಿ ಸಭೆ ಮಾಡಿದ್ದಾರೆ. ರೈತರಿಗೆ ಬೆಳೆ ಪರಿಹಾರ ಬೇಗ ಸಿಗುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ಇದೇ ತಿಂಗಳ 26ರಿಂದ ಮತ್ತೊಂದು ಸೈಕ್ಲೋನ್ ಬೀಸಲಿದೆ. ಇದೇ ತಿಂಗಳ 26, 27, 28ರಂದು ಅಗತ್ಯ ಎಚ್ಚರಿಕೆ ವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳೂ, ಅಧಿಕಾರಿಗಳು ಹಾಗೂ BBMP ಅಧಿಕಾರಿಗಳಿಗೆ ಎಚ್ಚರವಾಗಿರುವಂತೆ ಸೂಚನೆ ನೀಡಿದ್ದೇವೆ. ವಿಧಾನ ಪರಿಷತ್ ಚುನಾವಣೆ ನಾಮಪತ್ರ ಸಲ್ಲಿಕೆ ಆಗಿದೆ. ಇನ್ನೇನಿದ್ರೂ ಮತದಾನ, ಹಾಗಾಗಿ ಸೈಕ್ಲೋನ್ ಕಡೆ ಗಮನ ನೀಡುವಂತೆ ಹೇಳಲಾಗಿದೆ. ಕಾಫಿ ಸೇರಿದಂತೆ ಎಲ್ಲಾ ಬೆಳೆಗಳಿಗೂ ಪರಿಹಾರ ನೀಡಲಾಗುತ್ತದೆ ಎಂದು ಆರ್.ಅಶೋಕ್ ಹೇಳಿದ್ದಾರೆ.
Kshetra Samachara
25/11/2021 03:47 pm