ಬೆಂಗಳೂರು-ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್ ಗಳ ಪುನರ್ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸಂಬಂಧ ಹೈಕೋರ್ಟ್ ನಲ್ಲಿ ಇಂದು ವಾದ-ಪ್ರತಿವಾದ ಜರುಗುತ್ತಿದೆ.
ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್ ಗಳ ಮರು ವಿಂಗಡಣೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ವಕೀಲ ಎಸ್.ಇಸ್ಮಾಯಿಲ್ ಜಬಿವುಲ್ಲಾ ಸಲ್ಲಿಸಿದ ಅರ್ಜಿ ಒಳಗೊಂಡಂತೆ ಪದ್ಮನಾಭನಗರ, ಶಾಂತಿನಗರ ಮತ್ತು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರಗಳ ಬಿಬಿಎಂಪಿ ವಾರ್ಡ್ ಗಳ ಮರು ವಿಂಗಡಣೆಯನ್ನು ಪ್ರಶ್ನಿಸಿಯೂ ಹೈಕೋರ್ಟ್ ಗೆ ಸಲ್ಲಿಸಿರುವ ತಕರಾರು ಅರ್ಜಿಗಳ ವಿಚಾರಣೆ ನಡೆಯಿತು.
ಇದೇ ತಿಂಗಳ 11ರಂದು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ನ್ಯಾಯಪೀಠವು ಆ.16ರವರೆಗೆ ವಾರ್ಡ್ ವಾರು ಮೀಸಲು ಪಟ್ಟಿ ಅಂತಿಮಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಷ್ಟೇ ಅಲ್ಲದೆ, ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ, ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಆದೇಶಿಸಿತ್ತು.
ಅರ್ಜಿದಾರರ ಕೋರಿಕೆ ಏನು: ಗೋವಿಂದರಾಜನಗರ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್ ಗೆ ಸರಾಸರಿ 30 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ವಾರ್ಡ್ ಗಳ ಸಂಖ್ಯೆ ಸಹ ಹೆಚ್ಚಿಸಲಾಗಿದೆ. ಆದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್ ಗೆ ಸರಾಸರಿ 39 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ.
ಹಿಂದೆ ಏಳು ವಾರ್ಡ್ ಗಳು ಇದ್ದವು. ಇದೀಗ ಕೆ.ಆರ್.ಮಾರ್ಕೆಟ್ ವಾರ್ಡ್ ಕೈಬಿಟ್ಟು ವಾರ್ಡ್ ಗಳ ಸಂಖ್ಯೆಯನ್ನು ಆರಕ್ಕೆ ಇಳಿಸುವ ಮೂಲಕ ತಾರತಮ್ಯ ಮಾಡಲಾಗಿದೆ. ಹೀಗಾಗಿ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್ ಗಳನ್ನು ಪುನರ್ ರಚಿಸಿ 2022ರ ಜು.14ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಹೊಸದಾಗಿ ವಾರ್ಡ್ ಗಳನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಐತಿಹಾಸಿಕ ಕೆ.ಆರ್.ಮಾರ್ಕೆಟ್ ವಾರ್ಡ್ ಮರು ರಚಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
PublicNext
16/08/2022 02:03 pm