ಎಕ್ಸ್ ಕ್ಲೂಸಿವ್ ವರದಿ: ಗಣೇಶ್ ಹೆಗಡೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮ ಚಟುವಟಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಲು ಅನುಮತಿ ಕೋರಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಲ್ಲಿಸಿರುವ 49 ಪ್ರಸ್ತಾವಗಳ ಬಗ್ಗೆ ಕ್ರಮದ ಕುರಿತ ವರದಿ ಸಿದ್ಧ ವಾಗುತ್ತಿದೆ.
ನಗರಾಭಿವೃದ್ಧಿ ಇಲಾಖೆಯ ಸೂಚನೆ ಮೇರೆಗೆ ಬಿಡಿಎ ಆಯುಕ್ತರಿಂದ ಸಮಗ್ರ ವರದಿ ಸಿದ್ಧವಾಗುತ್ತಿದ್ದು, ಎಸಿಬಿ ದಾಳಿಗೆ ಒಳಗಾದ ಬಿಡಿಎ ಉಪ ಕಾರ್ಯದರ್ಶಿ ಗಳಲ್ಲಿ ನಡುಕ ಶುರುವಾಗಿದೆ.
ಸಾರ್ವಜನಿಕರು ನೀಡಿದ್ದ ದೂರುಗಳನ್ನು ಆಧರಿಸಿ ನ. 19ರಿಂದ 23ರ ವರೆಗೆ ಸ್ವಯಂಪ್ರೇರಿತ ಕಾರ್ಯಾಚರಣೆ ನಡೆಸಿದ್ದ ಎಸಿಬಿ, ಬಿಡಿಎನಲ್ಲಿ ನಡೆದಿರುವ ನೂರಾರು ಕೋಟಿ ಮೊತ್ತದ ಭ್ರಷ್ಟಾಚಾರ ಪ್ರಕರಣಗಳನ್ನು ಪತ್ತೆಹಚ್ಚಿತ್ತು.
ಈ ಸಂಬಂಧ 25 ಪ್ರಕರಣಗಳನ್ನು ದಾಖಲಿಸಲು ಅನುಮತಿ ಕೋರಿ ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ನಗರಾಭಿವೃದ್ಧಿ ಇಲಾಖೆಗೆ ನವೆಂಬರ್ ಕೊನೆ ವಾರ ಮತ್ತು ಡಿಸೆಂಬರ್ ಮೊದಲ ವಾರ ಸರಣಿ ಪತ್ರಗಳನ್ನು ಬರೆದಿದ್ದರು.
ಈ ಬಗ್ಗೆ ವರದಿ ನೀಡುವಂತೆ ಬಿಡಿಎ ಆಯುಕ್ತ ರಾಜೇಶ್ ಗೌಡರವರಿಗೆ ಸೂಚನೆ ನೀಡಿತ್ತು ನಗರಾಭಿವೃದ್ಧಿ ಇಲಾಖೆ.
ಬಿಡಿಎ ನಲ್ಲಿ ಭೂಸ್ವಾಧೀನ, ಪರಿಹಾರ ಪಾವತಿ, ನಿವೇಶನಗಳ ಹಂಚಿಕೆ, ಸಗಟು ನಿವೇಶನಗಳ ಮಂಜೂರಾತಿ, ಭೂಸ್ವಾಧೀನ ಪಡಿಸಿಕೊಂಡಿದ್ದ ಜಮೀನುಗಳ ಡಿನೋಟಿಫಿಕೇಷನ್ ಸೇರಿದಂತೆ ಹಲವು ಬಗೆಯ ಅಕ್ರಮಗಳು ನಡೆದಿರುವುದನ್ನು ಎಸಿಬಿ ತನಿಖಾ ತಂಡ ಪತ್ತೆ ಮಾಡಿದೆ. ಒಟ್ಟು 20 ಕೆಎಎಸ್ ಅಧಿಕಾರಿಗಳು ಸೇರಿದಂತೆ 70ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ನೌಕರರು ತನಿಖೆಯ ವ್ಯಾಪ್ತಿಗೆ ಬರಲಿದ್ದಾರೆ ಎಂಬ ಮಾಹಿತಿಯಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಡಿಎ ಅಧ್ಯಕ್ಷ ವಿಶ್ವನಾಥ್ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
PublicNext
26/01/2022 01:07 pm