ಬೆಂಗಳೂರು: ಕಬ್ಬನ್ ಪಾರ್ಕ್‌ಗೆ ಸಾಕು ನಾಯಿಗಳ ಪ್ರವೇಶ ನಿಷೇಧಿಸಿರುವುದರ ಕುರಿತು ತೋಟಗಾರಿಕಾ ಸಚಿವ ಮುನಿರತ್ನರೊಂದಿಗೆ ಮಾತುಕತೆ ನಡೆಸಿದ್ದೇನೆ. ಇದರ ಫಲಪ್ರದವಾಗಿ ಜುಲೈ 1 ರಿಂದ ಜಾರಿಯಾಗಬೇಕಿದ್ದ ಸಾಕು ನಾಯಿಗಳ ಪ್ರವೇಶದ ನಿರ್ಬಂಧವನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದಾಗಿ ತೋಟಗಾರಿಕೆ ಇಲಾಖೆ ಹೇಳಿದೆ ಎಂದು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಾಯಿಗಳನ್ನು ಸಾಕಿರುವವರು ಮತ್ತು ಪ್ರಾಣಿ ರಕ್ಷಣಾ ಸಂಘಟನೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ರೀತಿ ನಿಷೇಧ ಹೇರಿದರೆ ನಾಯಿಗಳಿಗೆ ಸ್ವತಂತ್ರವಾಗಿ ಓಡಾಡಲು ಸ್ಥಳವೇ ಇಲ್ಲವಾಗುತ್ತದೆ ಎಂದು ಆಗ್ರಹಿಸಿ ಚೇಂಜ್ ಆರ್ಗ್‌ನಲ್ಲಿ ಅಭಿಯಾನವನ್ನೂ ನಡೆಸಲಾಗಿತ್ತು ಎಂದು ಮೋಹನ್ ಹೇಳಿದ್ದಾರೆ. ಕೆಲವರ ತಪ್ಪಿಗೆ ಎಲ್ಲರಿಗೂ ಶಿಕ್ಷೆ ವಿಧಿಸುವುದು ತಪ್ಪು ಎಂದು ಸಾಕುನಾಯಿಗಳ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.
ಆದ್ರೆ ಕಬ್ಬನ್ ಪಾರ್ಕ್‌ಗೆ ಬರುವ ನಾಯಿಗಳಿಂದ ತೊಂದರೆಯಗುತ್ತದೆ ಎಂದು ಸಾಕಷ್ಟು ಜನರು ದೂರು ನೀಡಿದ್ದರು. ಇದೀಗ ನಿರ್ಬಂಧ ಜುಲೈ 1ರಿಂದ ಜಾರಿಗೆ ಬರುವುದಿಲ್ಲ. ಮುಂದಿನ ಸಭೆಯಲ್ಲಿ ಈ ಕುರಿತು ತೋಟಗಾರಿಕೆ ಇಲಾಖೆಯು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
PublicNext
29/06/2022 04:02 pm