ದೊಡ್ಡಬಳ್ಳಾಪುರ: ನಗರದ ಪ್ರಮುಖ ಸ್ಥಳ, ಮಾರುಕಟ್ಟೆಯಲ್ಲಿ ಈ ಜಾಗಕ್ಕೆ 2 ಕೋಟಿಗೂ ಹೆಚ್ಚು ಮೌಲ್ಯ ಇದೆ, ಇದೇ ಜಾಗ ರಾಷ್ಟ್ರೀಯ ಹೆದ್ದಾರಿ 207 ನಿರ್ಮಾಣಕ್ಕೆ ಸ್ವಾಧೀನವಾಗಿದೆ. 12 ಲಕ್ಷ ಪರಿಹಾರ ನೀಡುವುದಾಗಿ ಭೂಸ್ವಾಧೀನ ಅಧಿಕಾರಿಗಳು ಹೇಳಿದ್ದಾರೆ. ಚಿನ್ನದ ಬೆಲೆಯ ನಿವೇಶನ ಕಳೆದುಕೊಂಡಿರುವ ನಿವೇಶನದಾರ ನಮ್ಮ ಕುಟುಂಬದವರ ಸಮಾಧಿಗಳ ಮೇಲೆ ಹೆದ್ದಾರಿ ನಿರ್ಮಾಣವಾಗಲಿ ಅಂತಾ ತಮ್ಮ ಅಸಹಾಯಕತೆ ತೋಡಿಕೊಂಡರು.
ದಾಬಸ್ ಪೇಟೆ- ಹೊಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ದೊಡ್ಡಬಳ್ಳಾಪುರ ನಗರದ ಮೂಲಕ ಹಾದು ಹೋಗಿದ್ದು, ನಗರದಲ್ಲಿನ ವಾಹನದಟ್ಟಣೆ ತಡೆಯುವ ಕಾರಣಕ್ಕೆ ನಗರದ ಹೊರಗೆ ಹೊರವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಿಂದೂಪುರ - ಯಲಹಂಕ ರಸ್ತೆಯ ಅಪೆರಲ್ ಪಾರ್ಕ್ ಮೂಲಕ ಹೊರವರ್ತುಲ ರಸ್ತೆ ಹಾದು ಹೋಗಿದ್ದು, ಇದೇ ಜಾಗದಲ್ಲಿ ದೊಡ್ಡಬಳ್ಳಾಪುರ ನಗರದ ಮಾಲಾ ಶಿವಶಂಕರ್ ರವರ ಕೋಟಿ ಮೌಲ್ಯದ 40 × 90 ನಿವೇಶನ ಇದೆ. ಸಂಪೂರ್ಣ ನಿವೇಶನ ಹೆದ್ದಾರಿ ಸ್ವಾಧೀನಕ್ಕೆ ಒಳಗಾಗಿದೆ ಆದರೆ ಇಲ್ಲಿಯವರೆಗೂ ನಯಾ ಪೈಸೆ ಪರಿಹಾರ ಸಿಕ್ಕಿಲ್ಲ ಅವರಿಗೆ.
2009 ರಲ್ಲಿ ಮಾಲಾ ಶಿವಶಂಕರ್ ರವರ ವರದನಹಳ್ಳಿಯ ಜಮೀನು ಕೈಗಾರಿಕಾ ಪ್ರದೇಶ ಸ್ವಾಧೀನಕ್ಕೆ ಒಳಗಾಗಿತ್ತು. ಸರ್ಕಾರದಿಂದ ಸಿಕ್ಕ 45 ಲಕ್ಷ ಪರಿಹಾರದ ಹಣದಿಂದ ಈ ನಿವೇಶನ ಖರೀದಿ ಮಾಡಿದ್ರು. ಮಕ್ಕಳ ಭವಿಷ್ಯಕ್ಕಾಗಿ ಖರೀದಿ ಮಾಡಿದ ನಿವೇಶನ ಈಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನವಾಗಿದೆ. 2013 ರಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ನೋಟಿಫಿಕೇಶನ್ ಹೊರಡಿಸಲಾಗಿದ್ದು ಆದರೆ ಮಾಲಾ ಶಿವಂಶಕರ್ ರವರಿಗೆ ನೋಟಿಸ್ ಸಹ ಬಂದಿಲ್ಲ. ಇದೀಗ ಏಕಾಏಕಿ ಮಾಲಾ ಶಿವಶಂಕರ್ ಜಾಗದಲ್ಲಿ ಮೇಲ್ಸೇತುವೆ ಕಾಮಾಗಾರಿ ಪ್ರಾರಂಭಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಮಾಲಾ ಶಿವಶಂಕರ್ ಪರಿಹಾರ ನೀಡುವಂತೆ ಮನವಿ ಮಾಡಿದ್ದರು, ಪ್ರತಿ ಚದರ ಆಡಿ ಜಾಗಕ್ಕೆ 400 ರೂಪಾಯಿ ಪರಿಹಾರ ಕೊಡುವುದಾಗಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈ ಜಾಗ ಪ್ರತಿಚದರ ಅಡಿಗೆ 8000 ಬೆಲೆ ಬಾಳುತ್ತೆ. ಒಟ್ಟು 2 ಕೋಟಿ ಮೌಲ್ಯದ ಜಾಗಕ್ಕೆ 12 ಲಕ್ಷ ಪರಿಹಾರ ನೀಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಬೇಸತ್ತ ಶಿವಶಂಕರ್ ಸರ್ಕಾರ ಕೊಡುವ 12 ಲಕ್ಷ ಪರಿಹಾರ ಬೇಡ, ನಮ್ಮ ಕುಟುಂಬದವರು ಇದೇ ಜಾಗದಲ್ಲಿ ಜೀವಂತ ಸಮಾಧಿಯಾಗುತ್ತೇವೆ, ನಮ್ಮ ಸಮಾಧಿಗಳ ಮೇಲೆ ಹೆದ್ದಾರಿ ಕಾಮಾಗಾರಿ ಮಾಡಲಿ ಎಂದು ತಮ್ಮ ಅಸಹಾಯಕತೆ ತೊಡಿಕೊಂಡರು.
ಈಗಾಗಲೇ ಸರ್ಕಾರ ಕೈಗಾರಿಕಾ ವಲಯ ಸ್ಥಾಪನೆಗಾಗಿ ಶಿವಶಂಕರ್ ರವರ ಜಮೀನು ಸ್ವಾಧೀನ ಮಾಡಿದೆ. ಈಗ ಹೆದ್ದಾರಿಗೆ ಇವರ ನಿವೇಶನ ಸ್ವಾಧೀನಕ್ಕೆ ಮುಂದಾಗಿದೆ, ಸರ್ಕಾರದ ಅಭಿವೃದ್ಧಿಯ ದಾಹಕ್ಕೆ ಶಿವಶಂಕರ್ ಕುಟುಂಬ ಬಲಿಪಶುವಾಗಿದೆ.
PublicNext
22/04/2022 06:03 pm