ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸದ್ಯದಲ್ಲೇ ಹಳೆಯ ಬಡಾವಣೆ ಬಿಬಿಎಂಪಿಗೆ ಹಸ್ತಾಂತರ; ಎಸ್.ಆರ್.ವಿಶ್ವನಾಥ್

ಬೆಂಗಳೂರು: ಬನಶಂಕರಿ, ಅಂಜನಾಪುರ ಮತ್ತು ವಿಶ್ವೇಶ್ವರಯ್ಯ ಬಡಾವಣೆಗಳನ್ನು ಅಗತ್ಯವಿರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ ಶೀಘ್ರದಲ್ಲೇ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಬನಶಂಕರಿ 6ನೇ ಹಂತ, ಜೆ.ಪಿ ನಗರ 8 & 9ನೇ ಹಂತ ಹಾಗೂ ಅಂಜನಾಪುರ ಮುದುವರೆದ ಬಡಾವಣೆಗಳ ಮೂಲಸೌಕರ್ಯ ಕುರಿತು ಎಸ್.ಆರ್.ವಿಶ್ವನಾಥ್, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬಿಡಿಎ ಆಯುಕ್ತ ಎಂ.ಬಿ.ರಾಜೇಶ್ ಗೌಡ ಅವರ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ದಿಢೀರ್ ಸ್ಥಳ ಪರಿಶೀಲನೆ ನಡೆಸಿತು.

ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಅಹವಾಲು ಸ್ವೀಕರಿಸಿದ ಎಸ್.ಆರ್.ವಿಶ್ವನಾಥ್ ಅವರು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಳೆಯ ಬಡಾವಣೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಿ, ಆ ಬಡಾವಣೆಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಬಿಡಿಎ ಕಾರ್ಯೋನ್ಮುಖವಾಗಿದೆ ಎಂದರು.

ನಾನಾ ಕಾರಣಗಳಿಂದಾಗಿ ಅಂಜನಾಪುರ, ಬನಶಂಕರಿ ಮತ್ತು ವಿಶ್ವೇಶ್ವರಯ್ಯ ಬಡಾವಣೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಳಂಬವಾಗಿದೆ. ಮತ್ತಷ್ಟು ವಿಳಂಬ ನೀತಿ ಅನುಸರಿಸದೇ ಈ ಬಡಾವಣೆಗಳಿಗೆ ಕುಡಿಯುವ ನೀರು, ಒಳಚರಂಡಿ, ವಿದ್ಯುತ್, ರಸ್ತೆ ಸಂಪರ್ಕ ಸೇರಿದಂತೆ ಇನ್ನಿತರೆ ಮೂಲಸೌಕರ್ಯಗಳನ್ನು ಕಲ್ಪಿಸಲು ಬಿಡಿಎ ಪ್ರಾಧಿಕಾರ ಮಂಡಳಿಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ದಕ್ಷಿಣ ಮತ್ತು ಯಶವಂತಪುರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಬಿಡಿಎ ಬಡಾವಣೆಗಳ ಮೂಲಸೌಕರ್ಯಕ್ಕಾಗಿ ಸುಮಾರು 400 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಈಗಾಗಲೇ 200 ಕೋಟಿ ರೂಪಾಯಿಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದರು.

ಅದೇ ರೀತಿ ಅರ್ಕಾವತಿ ಬಡಾವಣೆಯ ಮೂಲಸೌಕರ್ಯಕ್ಕಾಗಿ 450 ಕೋಟಿ ರೂಪಾಯಿಗಳು ಮತ್ತು ಹೆಬ್ಬಾಳ ಮೇಲ್ಸೇತುವೆಯ ವಿಸ್ತರಣೆಗಾಗಿ 175 ಕೋಟಿ ರೂಪಾಯಿಗಳ ಯೋಜನೆಯನ್ನು ಬಿಡಿಎ ಕೈಗೆತ್ತಿಕೊಳ್ಳುತ್ತಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸಲು ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಿದ್ದು, ಗುತ್ತಿಗೆದಾರರಿಗೆ ಹಣವನ್ನೂ ಬಿಡುಗಡೆ ಮಾಡಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲು ಸೂಚಿಸಲಾಗಿದೆ ಎಂದು ವಿಶ್ವನಾಥ್ ಇದೇ ಸಂದರ್ಭದಲ್ಲಿ ತಿಳಿಸಿದರು.

Edited By : Vijay Kumar
Kshetra Samachara

Kshetra Samachara

08/08/2022 11:08 pm

Cinque Terre

1.82 K

Cinque Terre

0

ಸಂಬಂಧಿತ ಸುದ್ದಿ