ಮಹಾದೇವಪುರ: ಮಹಾದೇವಪುರ ಕ್ಷೇತ್ರದ ಮಾರತ್ತಹಳ್ಳಿ ಸಮೀಪ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿರುವ ಮನೆಗಳಲ್ಲಿ ವಾಸವಾಗಿರುವುದೇ ದೊಡ್ಡ ಸವಾಲು. ಕುಡಿಯಲು ನೀರಿಲ್ಲದೆ, ಬೀದಿದೀಪ ವ್ಯವಸ್ಥೆಯಿಲ್ಲದೆ ನಿವಾಸಿಗಳು ಹೈರಾಣಾಗಿದ್ದಾರೆ.
2 ವಾರದಿಂದ ಒಳಚರಂಡಿ ತುಂಬಿ ಹರಿಯುತ್ತಿದ್ದರೂ ಅಧಿಕಾರಿಗಳು ಇತ್ತ, ಚಿತ್ತ ಹರಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ಜನಾಂದೋಲನ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಮಾತನಾಡಿದ ಕೆಜೆಎಸ್ ರಾಜ್ಯಾಧ್ಯಕ್ಷ ಕೆ.ಮರಿಯಪ್ಪ, ಸ್ಲಂ ಬೋರ್ಡ್ ಅವ್ಯವಸ್ಥೆ ತಾಣವಾಗಿದೆ. ಇಲ್ಲಿನ ಮನೆ ನಿವಾಸಿಗರಿಗೆ ಮನೆಯ ಅಧಿಕೃತ ದಾಖಲೆ ಪತ್ರ ನೀಡದೆ, ಲಾಬಿ ಮಾಡುತ್ತಾ ಅವರಿವರ ಬಳಿ ಲಂಚ ಪಡೆಯುತ್ತಾ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಕಿಡಿಕಾರಿದರು.
ನೂರಾರು ಕುಟುಂಬಗಳಿರುವ ಇಲ್ಲಿ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ನಿರ್ವಹಣೆ ಸಹಿತ ಸ್ವಚ್ಛತೆಗೆ ಆದ್ಯತೆ ನೀಡದಿರುವುದರಿಂದ ನಿವಾಸಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತು, ಸಮಸ್ಯೆಗೆ ಪರಿಹಾರ ನೀಡದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರು.
PublicNext
09/02/2022 08:03 am