ವರದಿ - ಗಣೇಶ್ ಹೆಗಡೆ
ಬೆಂಗಳೂರು: ಶಿವನಾಂದ ವೃತ್ತದ ಸ್ಟೀಲ್ ಬ್ರಿಡ್ಜ್‌ಗೆ ಸ್ವಾತಂತ್ರ್ಯ ದಿನದಂದು ಮುಹೂರ್ತ ಕೂಡಿ ಬಂದಿತ್ತು ಎಂದುಕೊಳ್ಳಲಾಗಿತ್ತು. ಕಳೆದ 5 ವರ್ಷಗಳಿಂದ ನೆನ್ನಗುದ್ದಿಗೆ ಬಿದ್ದಿದ್ದ ಮೆಲ್ಸೇತುವೆ ಅಗಸ್ಟ್ 15 ಕ್ಕೆ ಸಂಚಾರದ ಭಾಗ್ಯ ಸಿಗಲಿದೆ ಎಂದು ಬಿಬಿಎಂಪಿ ಹೇಳಿತ್ತು. ಆದರೆ ಇದೀಗ ಸ್ಟೀಲ್ ಬ್ರಿಡ್ಜ್ ಮೇಲೆ ಓಡಾಡೋಕೆ ಇನ್ನೂ ಹಲವು ದಿನಗಳು ಕಾಯಬೇಕು ಎನ್ನಲಾಗುತ್ತಿದೆ.
ಮರಗಳ ತೆರವು, ಭೂಸ್ವಾಧಿನದ ಕಾರಣ ಶಿವಾನಂದ ಸ್ಟೀಲ್ ಬ್ರಿಡ್ಜ್ ಪ್ರಕರಣ ಹೈ ಕೋರ್ಟ್ ಮೆಟ್ಟಿಲೇರಿತ್ತು. ಇತ್ತೀಚೆಗೆ ನ್ಯಾಯಾಲಯ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪಾಲಿಕೆಗೆ ಸೂಚಿಸಿತ್ತು. ಹೀಗಾಗಿ ಬಿಬಿಎಂಪಿ ಐದು ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಿತ್ತು .
ಮಳೆಯ ಅಬ್ಬರಕ್ಕೆ ಸ್ಟೀಲ್ ಬ್ರಿಡ್ಜ್ ಉದ್ಘಾಟನೆ ಮತ್ತಷ್ಟು ವಿಳಂಬವಾಗಿದೆ. ಈ ಹಿಂದೆ ಪಾಲಿಕೆ ಆಗಸ್ಟ್ 15ಕ್ಕೆ ಸ್ಟೀಲ್ ಬ್ರಿಡ್ಜ್ ಓಡಾಟಕ್ಕೆ ಓಪನ್ ಎಂದಿತ್ತು. ಆದರೆ 25 ದಿನಗಳ ಕಾಲ ಬಿಟ್ಟೂ ಬಿಡದೆ ಕಾಡಿದ ಮಳೆಯಿಂದಾಗಿ ಸ್ಟೀಲ್ ಬ್ರಿಡ್ಜ್ ಕಾಮಗಾರಿ ವಿಳಂಬ ಆಗಿದೆ. ಹೀಗಾಗಿ ಆಗಸ್ಟ್ 15ಕ್ಕೆ ರಾಜ್ಯದ ಮೊದಲ ಉಕ್ಕಿನ ಸೇತುವೆ ಲೋಕಾರ್ಪಣೆ ಆಗಲ್ಲ ಎಂದು ಪಾಲಿಕೆ ಮೂಲಗಳಿಂದ ತಿಳಿದುಬಂದಿದೆ.
ಈ ಯೋಜನೆಗೆ 2017 ರಲ್ಲಿ ಅಡಿಪಾಯ ಹಾಕಲಾಯಿತು ಮತ್ತು ಸೇತುವೆಯ ನಿರ್ಮಾಣವನ್ನು ಪೂರ್ಣಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸುದೀರ್ಘ 5 ವರ್ಷಗಳಷ್ಟು ಸಮಯ ತೆಗೆದುಕೊಂಡಿದೆ.
ಕಾಮಗಾರಿ ಪೂರ್ಣಗೊಳಿಸುವ ಸಮಯದಲ್ಲಿ ಹಲವು ಅಡೆ ತಡೆಗಳು ಬಿಬಿಎಂಪಿಗೆ ಎದುರಾದವು. ಅವೆಲ್ಲವನ್ನು ನಿವಾರಣೆ ಮಾಡಿಕೊಂಡು ಅಂತಿಮವಾಗಿ ಕಾಮಗಾರಿ ಬಹುತೇಕ ಪೂರ್ಣವಾಗುವ ಹಂತಕ್ಕೆ ಬಂದಿದೆ.
ಉಕ್ಕಿನ ಸೇತುವೆ 493 ಮೀಟರ್ ಉದ್ದವಾಗಿದೆ. 16 ಕಂಬಗಳನ್ನು ನಿರ್ಮಿಸಲಾಗಿದೆ. ಆರಂಭಿಕವಾಗಿ 19 ಕೋಟಿ ರುಪಾಯಿ ಇದ್ದ ಯೋಜನೆಯ ಒಟ್ಟು ವೆಚ್ಚ ಕಾಮಗಾರಿ ಮುಗಿಯುವ ವೇಳೆಗೆ 39 ಕೋಟಿ ರುಪಾಯಿಗೆ ಬಂದು ನಿಂತಿದೆ.
PublicNext
13/08/2022 04:33 pm