ಕೆ.ಆರ್. ಪುರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಈ ಬಗ್ಗೆ ದೂರುಗಳ ಸುರಿಮಳೆ ಬಂದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಗೆ ಸಚಿವರು ಆಗಮಿಸುತ್ತಿದಂತೆಯೇ ಡಿಎಚ್ ಒ ʼಮಹಾಶಯʼ ಆಸ್ಪತ್ರೆಯತ್ತ ದೌಡಾಯಿಸಿದರು. ಈ ಸಂದರ್ಭ ಅಧಿಕಾರಿಗಳೊಡನೆ ಸಭೆ ನಡೆಸುವ ವೇಳೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿತ್ತು.
ಸಭೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, "ಸರ್ಕಾರಿ ಆಸ್ಪತ್ರೆಯ ವೈಫಲ್ಯತೆ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಯಾರಿಗೆ ಕೆಲಸ ನಿರ್ವಹಿಸಲು ಇಚ್ಛೆ ಇಲ್ಲವೋ ಅವರು ಮನೆಗೆ ತೆರಳಲು ಸೂಚನೆ ನೀಡಲಾಗಿದೆ. ಬಡರೋಗಿಗಳಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಯಾರು ಸಹಕರಿಸುವುದಿಲ್ಲವೋ ಅವರನ್ನು ವರ್ಗಾವಣೆ ಮಾಡಿ, ಹೊಸಬರನ್ನು ನೇಮಿಸಲಾಗುವುದು. ಒಂದು ವಾರದೊಳಗೆ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಿ ಕೊಡುವುದಾಗಿ ಡಿಎಚ್ ಒ ಭರವಸೆ ನೀಡಿದ್ದಾರೆ" ಎಂದರು.
ಜೊತೆಗೆ 10 ದಿನಗಳೊಳಗೆ 50 ಕೋಟಿ ವೆಚ್ಚದಲ್ಲಿ ನೂರು ಬೆಡ್ ಗಳ ಆಸ್ಪತ್ರೆಗೆ ಗುದ್ದಲಿ ಪೂಜೆ ನಡೆಸಲಾಗುವುದು. ಈ ಭಾಗದಲ್ಲಿ ಅತಿ ಹೆಚ್ಚು ಬಡವರು ನೆಲೆಸಿದ್ದು, ಎಲ್ಲರಿಗೂ ಅತ್ಯುತ್ತಮ ಚಿಕಿತ್ಸೆ ನೀಡುವ ಜವಾಬ್ದಾರಿ ವೈದ್ಯರ ಮೇಲಿದೆ. ನೂತನ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವರು ಸಹಕರಿಸಿದ್ದಾರೆ ಎಂದರು.
Kshetra Samachara
19/01/2022 04:34 pm