ಬೆಂಗಳೂರು: ಬಿಲ್ ಪಾವತಿಗೆ ವಿಳಂಬ ಧೋರಣೆ ಖಂಡಿಸಿ ಕಸ ಸಂಗ್ರಹ ಮತ್ತು ವಿಲೇವಾರಿ ಚಟುವಟಿಕೆ ನಿರ್ವಹಿಸುವ ಗುತ್ತಿಗೆದಾರರು ಮತ್ತು ಹೊರಗುತ್ತಿಗೆ ನೌಕರರು ತಮ್ಮ ಪ್ರತಿಭಟನೆ ಹಿಂಪಡೆದಿದ್ದಾರೆ.
ಗುತ್ತಿಗೆದಾರರೊಂದಿಗೆ ಸಂಧಾನ ಮಾತುಕತೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬೇಡಿಕೆ ಈಡೇರಿಸಲು ಒಪ್ಪಿಕೊಂಡದ್ದರಿಂದ ಗುತ್ತಿಗೆದಾರರು ಪ್ರತಿಭಟನೆ ಹಿಂಪಡೆಯುವುದಾಗಿ ಹೇಳಿದರು. ಕಳೆದ 2 ದಿನಗಳಿಂದ ಈ ಪ್ರತಿಭಟನೆ ನಡೆಯುತ್ತಿತ್ತು.
ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು) ತುಳಸಿ ಮದ್ದಿನೇನಿ ಬಿಲ್ ಪಾವತಿಗೆ ವಿಳಂಬಿಸುತ್ತಿದ್ದಾರೆ. 6 ತಿಂಗಳಿನಿಂದ ಬಿಲ್ ಪಾವತಿಯಾಗದ್ದರಿಂದ ಕಸ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಗುತ್ತಿಗೆದಾರರು ಹೇಳಿದರು. ಇಂದೂ (ಫೆ.19) ಸಹ ಕಸ ವಿಲೇವಾರಿಯಾಗದ ಹಿನ್ನೆಲೆಯಲ್ಲಿ ನಗರ ಕಸಮಯವೇ ಆಗಿತ್ತು.
ಗುತ್ತಿಗೆದಾರರೂ ಮನುಷ್ಯರೇ ಎಂಬುದು ಇವರಿಗೆ ಅರ್ಥವಾಗಬೇಕು. ಸೂಕ್ತ ಸಮಯಕ್ಕೆ ಹಣ ಬಿಡುಗಡೆ ಆಗದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುತ್ತವೆ. ಅಧಿಕಾರಿಗಳ ಮೊಂಡುತನದಿಂದ ಈ ಸಂಕಷ್ಟ ಬಂದಿದೆ. ಗುತ್ತಿಗೆದಾರರು 12 ಸಾವಿರ ಕಾರ್ಮಿಕರಿಗೆ ವೇತನ ಕೊಡಬೇಕಿದೆ.
8 ತಿಂಗಳಿಂದ ಬಾಕಿ ಬಿಡುಗಡೆ ಮಾಡದಿದ್ದರೆ ಸಂಬಳ ಕೊಡುವುದು ಹೇಗೆ’ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಎನ್.ಬಾಲಸುಬ್ರಹ್ಮಣ್ಯ ಪ್ರಶ್ನಿಸಿದ್ದರು. ಮುಖ್ಯವಾಗಿ ಹೆಚ್ಚು ಜನಸಂಚಾರದ ಕೆ.ಆರ್.ಮಾರುಕಟ್ಟೆ, ಎಸ್‌ಪಿ ರಸ್ತೆ, ಹಲಸೂರು, ಬನಶಂಕರಿ, ರಿಂಗ್ ರಸ್ತೆ, ಕತ್ರಿಗುಪ್ಪೆ, ರಾಜಾಜಿನಗರ, ಜಯನಗರ, ಹೆಬ್ಬಾಳ ಸಹಿತ ನಗರದ ಹಲವೆಡೆ ಕಸದ ರಾಶಿ ಬೆಳೆದಿತ್ತು!
Kshetra Samachara
19/02/2022 08:09 pm