ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ ಪೂರ್ಣವಾದ ಹಿನ್ನೆಲೆ ಇಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಜನೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ಸಜ್ಜಾಗಿತ್ತು. ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರಾತ್ರೋರಾತ್ರಿ ಕ್ಯಾನ್ಸಲ್ ಆಗಿದೆ.
ಇಷ್ಟಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂತಕದ ಮನೆಯಲ್ಲಿ ಸಂಭ್ರಮ ಬೇಡ ಅಂತ ಕಾರ್ಯಕ್ರಮ ರದ್ದು ಮಾಡಿರೋದಾಗಿ ಮಧ್ಯರಾತ್ರಿ ಹೇಳಿಕೆ ನೀಡಿದ್ದಾರೆ. ಆದ್ರೆ, ಕಾರ್ಯಕ್ರಮ ರದ್ದಾದ ಹಿಂದಿನ ಅಸಲಿಯತ್ತು ಬೇರೆನೇ ಇದೆ.
ಕಾರ್ಯಕ್ರಮಕ್ಕೆ ಭಜರಂಗ ದಳದ ಕರಿನೆರಳು ಆವರಿಸಿದ್ರಿಂದ ಕಾರ್ಯಕರ್ತರಿಗೆ ಹೆದರಿ ಕಾರ್ಯಕ್ರಮವನ್ನು ಸಿಎಂ ರದ್ದು ಮಾಡಿದ್ರು ಎಂದು ಹೇಳಲಾಗ್ತಿದೆ. ನಟ್ಟಿರುಳು ಬಂದ ಗುಪ್ತಚರ ಮಾಹಿತಿ ಕೇಳಿ ಸಿಎಂ ಶಾಕ್ ಆಗಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಭಜರಂಗದಳ ಸಾಕಷ್ಟು ಪ್ರಬಲವಾಗಿದ್ದು, ಇಂದಿನ ಕಾರ್ಯಕ್ರಮಕ್ಕೆ ಭಜರಂಗದಳ ಕಪ್ಪು ಪಟ್ಟಿ ಧರಿಸಿ ಕಪ್ಪು ಬಾವುಟ ಹಾರಿಸಿ ಧಿಕ್ಕಾರ ಕೂಗಿ ವಿರೋಧಿಸುವ ಚಿಂತನೆ ನಡೆಸಿದ್ರು.
ದೊಡ್ಡಬಳ್ಳಾಪುರ ಕಾರ್ಯಕರ್ತರ ಜೊತೆಗೆ ರಾಜ್ಯದ ಮೂಲೆ ಮೂಲೆಯಿಂದ ಬರುವ ಕಾರ್ಯಕರ್ತರೂ ಕಪ್ಪು ಪಟ್ಟಿ ಧರಿಸಿ ಬರಬೇಕು, ಧಿಕ್ಕಾರ ಕೂಗಬೇಕು ಎಂದು ನಿರ್ಧರಿಸಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 4ನೇ ಹಿಂದೂ ಕಾರ್ಯಕರ್ತನ ಕೊಲೆಯಾಗಿದ್ದು, ಪ್ರತಿ ಬಾರಿ ಕೊಲೆ ನಡೆದಾಗ ಹೇಳಿಕೆ ಕೊಡೋ ಸಚಿವರೆಲ್ಲ ಕಠಿಣ ಕ್ರಮ ಅಂತಲೇ ಹೇಳಿ ಸಬೂಬು ನೀಡ್ತಿದ್ರು. ಕಳೆದ ಬಾರಿ ಹರ್ಷ ಕೊಲೆ ಆರೋಪದಡಿ ಜೈಲು ಸೇರಿದ್ದ ಹಂತಕರು ಮೊಬೈಲ್ ನಲ್ಲಿ ರೀಲ್ಸ್ ಮಾಡೋ ವೀಡಿಯೊ ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು.
ಪ್ರವೀಣ್ ಕೊಲೆಗಾರರನ್ನು ಈಗಲೂ ಪತ್ತೆ ಹಚ್ಚಲಾಗಿಲ್ಲ.ಷ ಜೊತೆಗೆ ಸಂಭ್ರಮದ ಉತ್ಸವಕ್ಕೆ ಸಜ್ಜಾಗಿದ್ದ ನಾಯಕರ ನಡೆಗೆ ಸಹಜವಾಗಿಯೋ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಭಜರಂಗದಳ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಧಿಕ್ಕಾರ ಕೂಗಿದ್ರೆ, ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. ಜೊತೆಗೆ ಹೈಕಮಾಂಡ್ ಕೂಡ ಜನೋತ್ಸವ ಕಾರ್ಯಕ್ರಮ ಬೇಡ ಅಂತ ಹೇಳಿದ್ರಿಂದ ಸಿಎಂ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
PublicNext
28/07/2022 01:43 pm