ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಪ್ರಾಮುಖ್ಯತೆ ನೀಡ್ತಿದೆ; ಸಚಿವ ನಾಗೇಶ್

ಬೆಂಗಳೂರು: ಹಳ್ಳಿಗಾಡಿನ ಸರ್ಕಾರಿ ಶಾಲೆ ಮಕ್ಕಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು 'ಶಾಲೆಗೊಂದು ವಾಹನ' ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ನಗರದಲ್ಲಿಂದು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಶಾಲೆಗೆ ಒಳ್ಳೆಯ ಸಮವಸ್ತ್ರ ಧರಿಸಬೇಕು ಎನ್ನುವ ಆಸೆ ಇರುತ್ತೆ. ಅದೇ ರೀತಿ, ತಾವು ವಾಹನದಲ್ಲಿ ತೆರಳಬೇಕು ಎನ್ನುವ ಆಸೆಯೂ ಇದೆ.

ಹಾಗಾಗಿ, ಅಗತ್ಯಕ್ಕೆ ತಕ್ಕಂತೆ ಆಯಾ ಕ್ಷೇತ್ರವಾರು ಶಾಸಕರ ಅನುದಾನದಲ್ಲಿ ಶಾಲೆಗೆ ಒಂದು ವಾಹನ ಖರೀದಿ ಮಾಡಲಾಗುವುದು. ನಂತರ, ಇದನ್ನು ಆಯಾ ಶಾಲೆಯ ಎಸ್ ಡಿಎಂಸಿ ಸಮಿತಿಗಳೇ ನಿರ್ವಹಣೆ ಮಾಡಲಿವೆ ಎಂದು ವಿವರಿಸಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಕನ್ನಡ ಭಾಷೆ ಉಳಿಸುವುದಕ್ಕೆ ಮಾದರಿ ಶಾಲೆಗಳನ್ನು ರೂಪಿಸಲು ಯೋಚಿಸುತ್ತಿದ್ದೇವೆ. ಶೀಘ್ರದಲ್ಲಿಯೇ ಇದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದ ಅವರು, ಮಾದರಿ ಶಾಲೆಗಳಲ್ಲಿ ಸ್ಪೋಕನ್‌ ಇಂಗ್ಲಿಷ್‌ ಮಾತ್ರ ಕಲಿಸಿ ಇನ್ನುಳಿದವುಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಸುವುದಕ್ಕೆ ಯೋಚಿಸುತ್ತಿದ್ದೇವೆ.

ಪ್ರತಿ ಕ್ಲಾಸ್‌ಗೂ ಒಂದು ಕೊಠಡಿ ಇರಬೇಕು, ಪ್ರತಿ ಕ್ಲಾಸ್‌ಗೊಂದು ಶಿಕ್ಷಕರಿರಬೇಕು ಎಂಬುದನ್ನು ಯೋಚನೆ ಮಾಡುತ್ತಿದ್ದೇವೆ. ರಾಜ್ಯದ 1,500 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸುವ ಗುರಿಯಿದೆ ಎಂದರು.

1 ರಿಂದ 8ನೇ ಕ್ಲಾಸ್ ಮಕ್ಕಳಿಗೆ ಊಟದ ಜತೆ ಮೊಟ್ಟೆ ವಿತರಿಸಲು ನಿರ್ಧರಿಸಲಾಗಿದ್ದು, ಅದರಂತೆ ಶೈಕ್ಷಣಿಕ ಸಾಲಿನ 46 ವಾರಗಳಲ್ಲಿ ಯಾರು ಮೊಟ್ಟೆ ತಿನ್ನಲು ಇಚ್ಛೆ ಪಡುತ್ತಾರೆ, ಆ ವಿದ್ಯಾರ್ಥಿಗಳಿಗೆ ಮಾತ್ರ ಮೊಟ್ಟೆ ನೀಡಲಾಗುವುದು. ಯಾರಿಗೂ ಬಲವಂತವಾಗಿ ಮೊಟ್ಟೆ ತಿನ್ನಿಸುವ ಹಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಅದರ ಜೊತೆಗೆ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಪೌಷ್ಠಿಕಯುಕ್ತ ಚಿಕ್ಕಿ ಅಥವಾ ಬಾಳೆಹಣ್ಣನ್ನು ವಿತರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಸುಮಾರು 200 ಕೋಟಿ ರೂ. ವೆಚ್ಚವಾಗಬಹುದು ಎಂದರು.

ಪ್ರೌಢಶಾಲಾ ಶಿಕ್ಷಕರ ಮುಂಬಡ್ತಿ ಕುರಿತು ಪ್ರತಿಕ್ರಿಯಿಸಿದ ಅವರು, ಶಿಕ್ಷಕರ ಮುಂಬಡ್ತಿ ಪ್ರಕ್ರಿಯೆ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಅದರಲ್ಲೂ 60:40 ಅನುಗುಣವಾಗಿ ನೇಮಕ ಮಾಡುವ ಇದೊಂದು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದ ಅವರು, ಅತಿಥಿ ಶಿಕ್ಷಕರು ಶಾಲಾ ಆರಂಭದಿಂದ ಬರಬೇಕೆಂದು ಸೂಚಿಸಲಾಗಿದ್ದು, 36 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದರು.

ಕೊರೊನಾ ಕಾರಣದಿಂದ ಕಲಿಕೆಯಲ್ಲಿ ಆಗಿದ್ದ ಹಿನ್ನಡೆಯಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಅದನ್ನು ಸರಿ ಮಾಡಲು ಕಲಿಕಾ ಚೇತರಿಕೆಗೆ ಒತ್ತು ನೀಡಿದ್ದೇವೆ. ಶಾಲೆಗಳಲ್ಲಿ ಶೇ.100ರಷ್ಟು ಮಕ್ಕಳ ಹಾಜರಾತಿ ಮಾಡುವ ಗುರಿಯಿದೆ ಎಂದು ಹೇಳಿದರು.

Edited By : Nagesh Gaonkar
PublicNext

PublicNext

19/07/2022 05:01 pm

Cinque Terre

21.32 K

Cinque Terre

0

ಸಂಬಂಧಿತ ಸುದ್ದಿ