ಬೆಂಗಳೂರು: ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನ ಪೂರ್ವ ಹಾಗೂ ಉತ್ತರ ವಿಭಾಗದ ಕೆಲ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಸರಣಿ ಇ ಮೇಲ್‌ಗಳು ಬಂದಿದ್ವು. ಮೇಲ್‌ಗಳನ್ನ ಕಂಡ ಶಾಲಾ ಆಡಳಿತ ಮಂಡಳಿ, ಪೋಷಕರು ಆತಂಕಕ್ಕೊಳಗಾಗಿದ್ದು, ಪೊಲೀಸರ ತಪಾಸಣೆಯ ಬಳಿಕ ಆತಂಕ ದೂರ ಆಗಿತ್ತು. ಜೊತೆಗೆ ಆ ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಇನ್ನು ಬಾಂಬ್ ಬೆದರಿಕೆ ಹಾಕಿದ ಆರೋಪಿಯ ಪತ್ತೆಗಾಗಿ ಸರ್ಕಸ್ ಮಾಡ್ತಲೇ ಇದ್ದಾರೆ.
ಈ ಮಧ್ಯೆ ಇವತ್ತು ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆಯ ಇ-ಮೇಲ್ ರವಾನೆಯಾಗಿದೆ. ಅದು ರಾಜ್ಯ ರಾಜಕಾರಣದ ಪ್ರಮುಖ ನಾಯಕ ಡಿ.ಕೆ ಶಿವಕುಮಾರ್ ಒಡೆತನದ ನ್ಯಾಷನಲ್ ಹಿಲ್ ವ್ಹೀವ್ ಪಬ್ಲಿಕ್ ಶಾಲೆಗೆ. ಆರ್ ಆರ್ ನಗರದಲ್ಲಿರೋ ಈ ಶಾಲೆಗೆ ನಿನ್ನೆ ಸಂಜೆ ಹುಚ್ಚ ವೆಂಕಟ್ ಎಂಬಾತನ ಹೆಸರಿನಲ್ಲಿರೋ ಕಿರಾತಕನೊಬ್ಬ, 'ನಿಮ್ಮ ಶಾಲೆಯಲ್ಲಿ ಬಾಂಬ್ ಇಡಲಾಗಿದೆ. ಅದು ಬೆಳಗ್ಗೆ 10 ಗಂಟೆಗೆ ಸ್ಫೋಟಗೊಳ್ಳಲಿದ್ದು, 200 ಮೀಟರ್ ವ್ಯಾಪ್ತಿಯಲ್ಲಿ ಭಾರಿ ಅನಾಹುತ ಸಂಭವಿಸುತ್ತದೆ. ಸಾಧ್ಯವಾದರೆ ತಡೆಯುವ ಪ್ರಯತ್ನ ಮಾಡಿ' ಅಂತ ಮೇಲ್‌ನಲ್ಲಿ ಬೆದರಿಕೆ ಹಾಕಿದ್ದ.
ಆ ಮೇಲ್‌ಗಳನ್ನ ಶಾಲೆಯ ಎಂ.ಡಿ. ಐಶ್ವರ್ಯ ಹಾಗೂ ಆಡಳಿತ ಮಂಡಳಿಗೆ ಕಳಿಸಿದ್ದು ಅದನ್ನ ಕಂಡು ಗಾಬರಿಯಾದ ಶಾಲಾ ಆಡಳಿತ ಮಂಡಳಿ ಪೊಲೀಸ್ರಿಗೆ ಸುದ್ದಿ ಮುಟ್ಟಿಸಿದ್ದರು. ಯಾವಾಗ ಬಾಂಬ್ ಅನ್ನೋ ಪದ ಕಿವಿಗೆ ಬಿತ್ತೋ ಎದ್ವೋ, ಬಿದ್ವೋ ಅಂತ ಓಡಿ ಆರ್ ಆರ್ ನಗರ ಪೊಲೀಸ್ರು ಸ್ಥಳಕ್ಕೆ ಶ್ವಾನದಳ, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಮೊದಲಿಗೆ ಶಾಲೆಗೆ ಬಂದಿದ್ದ ಮಕ್ಕಳನ್ನ ಮತ್ತೊಂದ್ ಸುರಕ್ಷತ ಸ್ಥಳಕ್ಕೆ ರವಾನೆ ಮಾಡಿದರು. ಅವರ ವಿದ್ಯಾಭ್ಯಾಸಕ್ಕೆ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಂಡರು. ಬಳಿಕ ಸ್ಕೂಲ್ ಕ್ಯಾಂಪಸ್‌ಅನ್ನು ಇಂಚಿಂಚು ಬಿಡದೇ ಜಾಲಾಡಿ ಬಾಂಬ್ ಇಲ್ಲ ಅನ್ನೋದನ್ನ ಕನ್ಫರ್ಮ್ ಮಾಡಿಕೊಂಡು ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎನ್ನುವುದನ್ನು ಪತ್ತೆ ಹಚ್ಚಿದರು. ಯಾವಾಗ ಬಾಂಬ್ ಇಲ್ಲ ಅನ್ನೋದು ಕನ್ಫರ್ಮ್ ಆಯ್ತೋ ಶಾಲೆಯ ಎಂಡಿ ಐಶ್ವರ್ಯ ಪೋಷಕರ ಬಳಿ ಎಲ್ಲ ವಿದ್ಯಾರ್ಥಿಗಳು ಸೇಫ್ ಆಗಿದ್ದಾರೆ. ಯಾವ ಪೋಷಕರು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು. ಇದರಿಂದ ಪೋಷಕರಲ್ಲಿ ಮನೆ ಮಾಡಿದ್ದ ಆತಂಕ ದೂರ ಆಗಿದೆ.
ಇನ್ನು ಬಾಂಬ್ ಇಲ್ಲ ಅನ್ನೋದು ತಪಾಸಣೆಯಿಂದ ಬೆಳಕಿಗೆ ಬಂದ ಬಳಿಕ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಆರ್ ಆರ್ ನಗರ ಪೊಲೀಸರು, ಹುಚ್ಚಾ ವೆಂಕಟ್ ಹೆಸರಿನಲ್ಲಿ ಬಾಂಬ್ ಬೆದರಿಕೆ ಮೇಲ್ ಮಾಡಿದವನ ಮೂಲ ಭೇದಿಸಲು ತನಿಖೆ ಚುರುಕುಗೊಳಿಸಿದ್ದಾರೆ.
PublicNext
18/07/2022 02:19 pm