ಆನೇಕಲ್: ಆನೇಕಲ್ ತಾಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿಯ ಇಗ್ಗಲೂರು ಗ್ರಾಮದಲ್ಲಿ ಸಮುದಾಯ ಭವನ ವಿಚಾರಕ್ಕೆ ಸಂಬಂಧಿಸಿ ಆರೋಪ-ಪ್ರತ್ಯಾರೋಪ ಕೇಳಿಬಂದಿದೆ. ಅದರಲ್ಲೂ ಜಾಗದ ವಿವಾದದಲ್ಲಿ ಗ್ರಾಮಸ್ಥರು ವ್ಯಕ್ತಿ ಮೇಲೆ ತಿರುಗಿ ಬಿದ್ದಿದ್ದಾರೆ.
ಇಗ್ಗಲೂರು ನಿವಾಸಿ ನಾಗೇಂದ್ರ ಅವರು ಮುನಿಯಮ್ಮ ಬಿನ್ ಪಾಪಣ್ಣ ಎಂಬವರಿಂದ 1991ರಲ್ಲಿ ಸಮುದಾಯ ಭವನದ ಜಾಗ ಖರೀದಿಸಿದ್ದಾರೆ. ಆದರೆ, ಚಂದಾಪುರ ಪುರಸಭೆ ಕಾರ್ಯನಿರ್ವಣಾಧಿಕಾರಿ, ಸಮುದಾಯ ಭವನಕ್ಕೆ ಸೇರಿದ ಜಾಗ ಎಂದು ನೋಟಿಸ್ ಮಾಡಿದರು. ಈ ಬಗ್ಗೆ ಇಂದು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು.
ಈ ವೇಳೆ ಮಾತನಾಡಿದ ನಾಗೇಂದ್ರ, ಆನೇಕಲ್ ಕೋರ್ಟ್ ನಲ್ಲಿ ಕೇಸ್ ಇದೆ. ಅದರೂ ನಮ್ಮ ಜಾಗಕ್ಕೆ ಬಂದು ತೊಂದರೆ ಕೊಡುತ್ತಿದ್ದಾರೆ. ಅಕ್ರಮ ಮಾಡಿದ್ದಾರೆ ಅಂತ ಹೇಳುತ್ತೀರಲ್ವಾ? ಒತ್ತುವರಿ ಮಾಡಿದ್ದರೆ ಅಲ್ಲಿ ಜಾಗ ಆದ್ರೂ ಇರಬೇಕಲ್ವಾ !? ಒಂದ್ಸಾರಿ ಅಂಗನವಾಡಿ ಅಂತಾರೆ, ಇನ್ನೊಂದ್ಸಾರಿ ಶಂಭುಲಿಂಗೇಶ್ವರ ಜಾಗ ಅಂತಾರೆ ಮತ್ತೆ ಅಂಬೇಡ್ಕರ್ ಭವನ ಹೇಳ್ತಿದ್ದಾರೆ.
ಅವ್ರು ದಾಖಲೆ ಕೊಡಲಿ, ಸರ್ಕಾರ ಏನು ಹೇಳುತ್ತೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದರು.
ನಾಗೇಂದ್ರ ಪತ್ನಿ ಪುಷ್ಪಾ ಮಾತನಾಡಿ, ಗಂಡನಿಗೆ ಪ್ರಾಣ ಬೆದರಿಕೆ ಇದೆ. ಏನಾದರೂ ಅನಾಹುತವಾದರೆ ಅದಕ್ಕೆ ನೇರ ಹೊಣೆ ರಾಜಪ್ಪ, ನಾಗೇಶ್, ರಾಮಸ್ವಾಮಿ ಹೀಗಾಗಿ ಪೊಲೀಸರು ನಮಗೆ ನ್ಯಾಯ ಕೊಡಿಸಬೇಕೆಂದು ತಿಳಿಸಿದರು.
ಇದೇ ವಿಚಾರಕ್ಕೆ ಸಂಬಂಧಿಸಿ ಸಂಜೆ ಗ್ರಾಮಸ್ಥರು ಸುದ್ದಿಗೋಷ್ಠಿ ನಡೆಸಿದ್ದರು. ಮುಖಂಡ ಬಾಲರಾಜ್ ಮಾತನಾಡಿ, ವೈ. ರಾಮಕೃಷ್ಣರ ಕಾಲದಲ್ಲಿ ಶಂಭುಲಿಂಗೇಶ್ವರ ದೇವಾಲಯ ಜಾಗ ಕೊಟ್ಟಿದ್ರು. ಆದರೆ, ಅದೇ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ನಾಗೇಂದ್ರ ಕಬಳಿಸಲು ಹುನ್ನಾರ ನಡೆಸಿದ್ದಾರೆಂದು ಆರೋಪಿಸಿದರು.
ವಾರ್ಡ್ ನಂ. 23 ಕೌನ್ಸಿಲರ್ ಮಮತಾ ಮಾತನಾಡಿ, ಸರ್ಕಾರಿ ಜಾಗದ ಕಬಳಿಕೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಅಧಿಕಾರಿಗಳು ನೋಟಿಸ್ ಕಳಿಸಿದ್ದರೂ ಕಾಮಗಾರಿ ಮುಂದುವರಿಸಿದ್ದರು. ಹೀಗಾಗಿ ಊರಿನವರು ತಿರುಗಿ ಬಿದ್ದಿದ್ದಾರೆ ಎಂದರು.
- ಹರೀಶ್ ಗೌತಮನಂದ ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
PublicNext
31/05/2022 11:03 pm